ಮುಂಬೈ: ಏಷ್ಯಾದ ಅತಿ ದೊಡ್ಡ ಕೊಳೆಗೇರಿಯಾದ ಮುಂಬೈನ ಧಾರಾವಿಯಲ್ಲಿ ಕರೊನಾ ದಿನೇದಿನೆ ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ. ಅಲ್ಲಿ ಗುರುವಾರ 11 ಹೊಸ ಪ್ರಕರಣಗಳು ವರದಿಯಾಗಿದ್ದು, ಧಾರಾವಿಯಲ್ಲಿನ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಇಲ್ಲಿ ಈವರೆಗೆ 8 ಜನರು ಸಾವನ್ನಪ್ಪಿದ್ದಾರೆ.
ಸುಮಾರು 15 ಲಕ್ಷ ಜನರು ವಾಸಿಸುತ್ತಿರುವ ಧಾರಾವಿಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿರುವುದು ಅಧಿಕಾರಿಗಳು ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಧಾರಾವಿಯಲ್ಲಿ ಕರೊನಾ ತನ್ನ ತೀವ್ರತೆ ಹೆಚ್ಚಿಸಿಕೊಂಡರೆ ತಕ್ಷಣಕ್ಕೆ ಪರಿಸ್ಥಿತಿ ನಿಯಂತ್ರಿಸುವುದು ತೀರ ಕಷ್ಟ ಎನ್ನಲಾಗುತ್ತಿದೆ.
ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಧಾರಾವಿ ಕೊಳೆಗೇರಿ ನಿವಾಸಿಗಳ ಸುರಕ್ಷತೆಗಾಗಿ ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ ನರ್ಸ್‌ಗಳ 10 ತಂಡಗಳನ್ನು ಸಿದ್ಧಗೊಳಿಸಿದೆ. ಈ ತಂಡಗಳು ಧಾರಾವಿಯಲ್ಲಿನ ಪ್ರತಿ ಮನೆಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿ ಮಾದರಿಗಳನ್ನು ಪಡೆಯಲಿವೆ. ಯಾರಲ್ಲಿ ಕೆಮ್ಮು, ಶೀತ ಹಾಗೂ ಜ್ವರದ ಲಕ್ಷಣಗಳು ಕಂಡು ಬರುತ್ತವೆಯೋ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ.