ಉಡುಪಿ, ಎ.15: ಪೂಜೆಗೆಂದು ಮುಂಬಯಿಗೆ ತೆರಳಿದ್ದ ಕಾರ್ಕಳ ತಾಲೂಕು ನೀರೆಬೈಲೂರಿನ ಅರ್ಚಕರೊಬ್ಬರು ಕೊರೋನ ಲಾಕ್‌ಡೌನ್ ವಿಸ್ತರಣೆಯಿಂದ ಅತ್ತ ಪೂಜೆಯೂ ಇಲ್ಲದೇ, ಇತ್ತ ಊರಿಗೂ ಮರಳಲಾಗದ ಸಂಕಟದಿಂದ ಬೇಸತ್ತು ಮಂಗಳವಾರ ಮುಂಬಯಿಯ ಕಾಂದಿವಿಲಿ ದೇವಸ್ಥಾನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕಾರ್ಕಳ ನೀರೆಬೈಲೂರು ನಿವಾಸಿ ಕೃಷ್ಣ ಶಾಂತಿ (37) ಆತ್ಮಹತ್ಯೆ ಮಾಡಿಕೊಂಡ ಅರ್ಚಕರಾಗಿದ್ದಾರೆ. ಇವರು ಕಳೆದ ಮಾ.17ರಂದು ಮುಂಬಯಿಯ ಕಾಂದಿವಿಲಿ ಪ್ರದೇಶದಲ್ಲಿರುವ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆಗೆಂದು ತೆರಳಿದ್ದರು. ತಾತ್ಕಾಲಿಕವಾಗಿ ಅರ್ಚಕ ವೃತ್ತಿ ನಿರ್ವಹಣೆಗಾಗಿ ತೆರಳಿದ್ದ ಅವರು ಅತ್ತ ಪೂಜೆ ಕೆಲಸವೂ ಇಲ್ಲದೇ, ಇತ್ತ ಲಾಕ್‌ಡೌನ್ ವಿಸ್ತರಣೆಯಿಂದ ಊರಿಗೂ ಮರಳಲಾಗದ ಚಿಂತೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಊರಿನಲ್ಲಿ ಇವರು ಪೂಜಾಕೈಂಕರ್ಯವನ್ನು ನಿರ್ವಹಿಸುತಿದ್ದರು. ಮುಂಬಯಿಯ ಭದ್ರಕಾಳಿ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಅರ್ಚಕರಾಗಿ ಕಾರ್ಯನಿರ್ವಹಿಸುವಂತೆ ಪರಿಚಿತರು ಕೋರಿಕೊಂಡ ಹಿನ್ನೆಲೆಯಲ್ಲಿ ಅವರು ಮಾ.17ರಂದು ಮುಂಬಯಿಗೆ ತೆರಳಿದ್ದರು. ದೇವಸ್ಥಾನದ ಕೊಠಡಿಯಲ್ಲಿ ಉಳಿದುಕೊಂಡಿದ್ದ ಅವರು ಮಾನಸಿಕ ಚಿಂತೆಯಿಂದ ನಿನ್ನೆ ದೇವಸ್ಥಾನದಲ್ಲೇ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾರೆ ತಿಳಿದುಬಂದಿದೆ.