ಮುಂಬೈ : ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಂತೂ ಕೊರೊನಾ ಭಾರಿ ಆತಂಕ ತಂದೊಡ್ಡಿದೆ. ಸೋಂಕು ನಿಯಂತ್ರಣ ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದ್ದು, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಏತನ್ಮಧ್ಯೆ, ಮುಂಬೈನ ಎಪಿಎಂಸಿಯಲ್ಲೂ ಕೊರೊನಾ ಆತಂಕ ಹೆಚ್ಚುತ್ತಿದೆ. ಇಂದು ಎಪಿಎಂಸಿಯಲ್ಲಿ ಕೆಲಸ ಮಾಡುವ ನಾಲ್ವರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕು ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇನ್ನು ಹಲವರಿಗೆ ಸೋಂಕು ತಗುಲುವ ಭೀತಿ ಎಂದುರಾಗಿದೆ. ಮುಂಬೈನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕೊರೊನಾ ವಾರಿಯರ್ಸ್ ಗೆ ಸೋಂಕು ನಿಯಂತ್ರಿಸುವ ಮಾತ್ರೆಗಳನ್ನು ಸುಮಾರು 7 ವಾರಗಳ ಕಾಲ ನೀಡಲು ನಿರ್ಧರಿಸಲಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಗರ್ಭಿಣಿಯರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಸೋಂಕು ನಿವಾರಕ ಮಾತ್ರೆಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.