
ಮಂಗಳೂರು: ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ. ಮೃತರನ್ನು ಮೂಲತಃ ಪುತ್ತೂರು ತಾಲೂಕು ಮುರುಳ್ಯ ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ವಾಸ್ತವ್ಯವಿರುವ ಉದ್ಯಮಿ ಅಬ್ದುಲ್ ಲತೀಫ್ (36) ಎಂದು ಗುರುತಿಸಲಾಗಿದೆ. .
ಈ ಹೊಡೆದಾಟದಲ್ಲಿ ಮೂವರಿಗೆ ಗಂಭೀರ ಗಾಯಗೊಂಡಿದ್ದು, ಇವರನ್ನು ಮುಲ್ಕಿ ಕಾರ್ನಾಡು ದರ್ಗಾ ರಸ್ತೆಯ ಬಳಿಯ ನಿವಾಸಿಗಳಾದ ಮುನೀರ್, ಇಯಾಝ್, ಇಮ್ರಾನ್ ಎಂದು ತಿಳಿದು ಬಂದಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಮತ್ತು ಬೈಕಿನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಮುನೀರ್ ಮತ್ತಿತರರ ಮೇಲೆ ಸೋಡಾ ಬಾಟಲಿ, ಮರದ ತುಂಡು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೃತ ಅಬ್ದುಲ್ ಲತೀಫ್, ಮುನೀರ್ ಕಾರ್ನಾಡು ಅವರ ಮಗಳ ಗಂಡ ಎಂದು ತಿಳಿದು ಬಂದಿದೆ. ಉದ್ಯಮಿ ಮುನೀರ್ ಕಾರ್ನಾಡು ಅವರ ಮೇಲಿನ ಹಳೆಯ ವೈಷಮ್ಯದಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಭೇಟಿ ನೀಡಿದ್ದಾರೆ.


