ಪುತ್ತೂರು : ಪುತ್ತೂರಿನ ಪಡುವನ್ನೂರು ಗ್ರಾಮದ ಸಜಂಕಾಡಿಯಲ್ಲಿ ತಾಯಿಯೇ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ 8 ವರ್ಷದ ಹೆಣ್ಣು ಮಗು ಅನ್ವಿತಾ ಸಾವನ್ನಪ್ಪಿದ್ದಾಳೆ.
ಸೆ.16ರಂದು ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬವರ ಪತ್ನಿ ದಿವ್ಯಶ್ರೀ (29) ತನ್ನ ಇಬ್ಬರು ಮಕ್ಕಳಾದ ಅಜಯ್ (10) ಮತ್ತು ಅನ್ವಿತಾ (8) ಅವರಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ ಬಳಿಕ ತಾನೂ ಸೇವಿಸಿದ್ದಾರೆ ಎನ್ನಲಾಗಿದೆ. ಪತಿಗೆ ಬೇರೊಂದು ಸ್ತ್ರೀಯೊಂದಿಗೆ ಸಂಬಂಧವಿದೆ ಎಂದು ಮನನೊಂದು ದಿವ್ಯಶ್ರೀ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ದಿವ್ಯಶ್ರೀ ಮಾರ್ಚ್ ನಿಂದ ತನ್ನ ಮಕ್ಕಳಾದ ಅಜಯ್ ಮತ್ತು ಅನ್ವಿತಾ ಅವರೊಂದಿಗೆ ಸಜಂಕಾಡಿ ಮನೆ ತೊರೆದು ಬಂದು ತನ್ನ ಸಂಬಂಧಿ ನಿಡ್ಪಳ್ಳಿ ಗ್ರಾಮದ ನಿವಾಸಿ ತುಂಗ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು . ಈ ನಡುವೆ ಮಾನಸಿಕವಾಗಿ ನೊಂದ ದಿವ್ಯಶ್ರೀ ಸೆ.16ರಂದು ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ ಬಳಿಕ ತಾನೂ ಕುಡಿದು ನಂತರ ಮಂಗಳೂರಿನ ತನ್ನ ಸಂಬಂಧಿ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಸೆ.18ರಂದು ಬಾಲಕಿ ವಾಂತಿ ಮಾಡಿ ಅಸ್ವಸ್ಥಗೊಂಡ ವೇಳೆ ಮಂಗಳೂರು ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಸೆ. 19ರಂದು ತಡ ರಾತ್ರಿ ವೇಳೆ ಬಾಲಕಿ ಅನ್ವಿತಾ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


