ಉಡುಪಿ: ನಿಮ್ಮ ಯುವಕರನ್ನು ನಿಯಂತ್ರಣದಲ್ಲಿ ಇಟ್ಟಿಲ್ಲ ಎಂದರೆ ಭವಿಷ್ಯದಲ್ಲಿ ಮುಸಲ್ಮಾನರಿಗೆ ಯಾವ ಮೆರವಣಿಗೆ ನಡೆಸಲು ಸಾಧ್ಯವಾಗಲಿಕ್ಕಿಲ್ಲ ಎಂದು ಕಾರ್ಕಳ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬಜರಂಗದಳದಿಂದ ಕರೆ ನೀಡಲ್ಪಟ್ಟಿದ್ದ ಬಿ.ಸಿ. ರೋಡ್ ಚಲೋ ಬಗ್ಗೆ ಉಡುಪಿಯಲ್ಲಿ ಹೇಳಿಕೆ ನೀಡಿದ ಶಾಸಕ ಸುನೀಲ್ ಕುಮಾರ್, ನಿಮ್ಮ ಯುವಕರನ್ನು ಹದ್ದುಬಸ್ತಿಲ್ಲಿಡುವ ಕೆಲಸ ಮಾಡಿ, ಬಹಿರಂಗವಾಗಿ ಸವಾಲು ಹಾಕುವುದು ನಿಲ್ಲಿಸಿ, ಜೊತೆಗೆ ಇದನ್ನು ಎಚ್ಚರಿಕೆ ಎಂದು ಪರಿಗಣಿಸಿ ಎಂದು ಹೇಳಿದ್ದಾರೆ.
ನಿಮ್ಮ ಸವಾಲುಗಳನ್ನು ಎದುರಿಸಲು ನಾವು ನಮ್ಮ ಯುವಕರು ತಯಾರಿದ್ದೇವೆ ಆದರೆ
ಅನಾಹುತಗಳು ಆಗಬಾರದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇದೆ ಎಂದು ಹೇಳಿರುವ ಸುನೀಲ್ ಕುಮಾರ್, ಹಿಂದುಗಳಿಗೆ ಗೌರವ ಕೊಟ್ಟು ಜೀವನ ನಡೆಸುವುದು ಕಲಿಯಿರಿ ಎಂದು ಹೇಳಿದ್ದಾರೆ.
ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ ಎಂದು ಆಡಿಯೋ ಹರಿಬಿಟ್ಟು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ್ದ ಕಾರಣ ಬಜರಂಗದಳ ಬಿ.ಸಿ. ರೋಡ್ ಚಲೋಗೆ ಕರೆ ಕೊಟ್ಟಿತ್ತು.