ಒಂದೆಡೆ ಸರ್ಕಾರವೇ ಹೇರಿರುವ ಲಾಕ್‌ಡೌನ್ ನಿಯಮ. ಮತ್ತೊಂದೆಡೆ ಅದೇ ಸರ್ಕಾರವನ್ನು ನಡೆಸುವ ಪಕ್ಷದ ಶಾಸಕರಿಂದ ಲಾಕ್‌ಡೌನ್ ನಿಯಮ ಉಲ್ಲಂಘನೆ. ಹೌದು ತುಮಕೂರು ಜಿಲ್ಲೆಯ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ವಿರುದ್ಧ ಲಾಕ್‌ಡೌನ್ ಹೊತ್ತಲ್ಲೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿ ತಮ್ಮ ಬೆಂಬಲಿಗರೊಂದಿಗೆ ಶಾಸಕ ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಿಸಿದ್ದಾರೆ. ವಿಶೇಷ ಎಂದರೆ ಕೈಗೆ ಗ್ಲೌಸ್ ಹಾಕಿಕೊಂಡೇ ಕೇಕ್ ಕಟ್ ಮಾಡಿದ್ದಾರೆ.
ಅಭಿಮಾನಿಗಳು ಶಾಸಕರಿಗೆ ಶಾಲು ಹೊದಿಸಿ ಪೇಟಾ ತೊಡಿಸಿ ಕೇಕ್ ತಿನ್ನಿಸಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿರಿಯಾನಿಯನ್ನೂ ಹಂಚಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯ ಇಡಗೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲೇ ಹುಟ್ಟುಹಬ್ಬದ ಆಚರಣೆ ನಡೆದಿದ್ದು, ಪೊಲೀಸರು ಕೂಡಾ ಸ್ಥಳದಲ್ಲೇ ಇದ್ದರು.
ಲಾಕ್‌ಡೌನ್ ಹೊತ್ತಲ್ಲಿ ಜನಸಾಮಾನ್ಯರು ಬೀದಿಗಿಳಿದ್ರೆ ಪೊಲೀಸರು ಲಾಠಿ ಬೀಸ್ತಾರೆ. ಸರ್ಕಾರ ಕೂಡಾ ಮನೆಯಲ್ಲಿ ಇರಿ, ಹೊರಗೆ ಬಂದು ಗುಂಪು ಸೇರದಂತೆ ಜನರಿಗೆ ಮನವಿ ಮಾಡುತ್ತಿದೆ. ಆದರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಲಾಕ್‌ಡೌನ್ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಹುಟ್ಟುಹಬ್ಬ ಮಾಡಿ ಸಂಭ್ರಮಿಸಿದ್ದಾರೆ.