ಬೆಳ್ತಂಗಡಿ :ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವೃದ್ದನ ಮೃತದೇಹ ಮನೆಯ ಸಮೀಪ ನದಿಯಲ್ಲಿ ಪತ್ತೆಯಾಗಿದೆ. ಬೆಳಾಲು ಗ್ರಾಮದ ಮುಂಡ್ರೋಟ್ಟು ಮನೆಯ ದೇವಪ್ಪ ಪೂಜಾರಿ(85) ಮೃತ ವ್ಯಕ್ತಿ.
ಸೆಪ್ಟೆಂಬರ್ 10 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದವರು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದರು. ವೃದ್ಧನ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿಗಳು ಸಿಕ್ಕಿರಲ್ಲಿಲ್ಲ. ಸೋಮವಾರ ಇವರ ಶವ ಬೆಳಾಲು ಗ್ರಾಮದ ಅಮುಂಜಿ ಸಮೀಪ ಹೊಳೆಯಲ್ಲಿ ಶೌರ್ಯ ವಿಪತ್ತು ಘಟಕದ ತಂಡದವರು ಪತ್ತೆಹಚ್ಚಿದ್ದಾರೆ.
ಮನೆ ಸಮೀಪವೇ ಹೊಳೆ ಹರಿಯುತ್ತಿದ್ದು ಸೆಪ್ಟೆಂಬರ್ 10 ರಂದು ಬೆಳಿಗ್ಗೆ ಧಾರಾಕಾರ ಮಳೆಯಿಂದಾಗಿ ನದಿಯಲ್ಲಿ ಜಾಸ್ತಿ ನೀರು ಬಂದಿದ್ದು ನದಿ ಬದಿಗೆ ಹೋದವರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರಬಹುದು ಎಂದು ಅನುಮಾನಿಸಲಾಗಿದೆ. ದೇವಪ್ಪ ಪೂಜಾರಿ ನಾಪತ್ತೆಯಾಗುತ್ತಿದ್ದಂತೆ ಶೌರ್ಯ ವಿಪತ್ತು ಘಟಕದ ತಂಡದವರು ಊರವರು ಹೊಳೆ ಹಾಗೂ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


