ಕರೊನಾ ಮಹಾಮಾರಿಯ ಕಣ್ಣು ಈಗ ಮದುವೆಯಂತಹ ಮಂಗಳ ಕಾರ್ಯಗಳ ಮೇಲೆ ಬಿದ್ದಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ನಿಶ್ಚಯವಾಗಿದ್ದ ಶೇ.45ಕ್ಕೂ ಹೆಚ್ಚು ವಿವಾಹಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಮದುವೆ ನಿಶ್ಚಯ ಮಾಡಿಕೊಂಡು ಕಲ್ಯಾಣಮಂಟಪದ ಹುಡುಕಾಟದಲ್ಲಿದ್ದವರೂ ಕೂಡ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ ತಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇನಲ್ಲಿ ಹೆಚ್ಚಿನ ವಿವಾಹ ಮುಹೂರ್ತಗಳಿರುವ ಕಾರಣ ಪ್ರತೀ ವರ್ಷ ಈ ಅವಧಿ ವಿವಾಹ ಋತು ಎಂದೇ ಪ್ರಸಿದ್ಧಿ. ಆದರೆ ಈ ವರ್ಷ ಜನರು ಕರೊನಾ ಕಾರಣಕ್ಕೆ ಮುಹೂರ್ತ ನೋಡುವುದಕ್ಕೂ ಹಿಂಜರಿಯುವಂತಾಗಿದೆ.
ಸ್ಟಾರ್ಗಳಿಗೂ ಆತಂಕ:
ಕನ್ನಡದ ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯ ಮದುವೆ ಏ.17ರಂದು ನಿಶ್ಚಯವಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ತಮ್ಮ ಮದುವೆಯನ್ನು ಸರಳ ರೀತಿಯಲ್ಲಿ ನಡೆಸಲು ನಿಶ್ಚಯಿಸಿದ್ದಾರೆ. ತೆಲುಗು ನಟ ನಿತಿನ್ ಏ.16ರಂದು ನಿಗದಿಯಾಗಿದ್ದ ಮದುವೆಯನ್ನು ಕರೊನಾ ಭಯದಿಂದ ಮುಂದೂಡಿದ್ದಾರೆ. ತಮಿಳು ನಟ ವಿಷ್ಣು ವಿಶಾಲ್ , ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ವಿವಾಹ ಕೂಡ ಮುಂದೂಡಿಕೆ ಆಗುವ ಸಾಧ್ಯತೆ ಇದೆ.
ವೆಡ್ವಿುಗುಡ್.ಕಾಮ್ ಸಮೀಕ್ಷೆ
ವಿವಾಹ ಯೋಜನಾ ವೆಬ್ಸೈಟ್ ವೆಡ್ವಿುಗುಡ್.ಕಾಮ್ ಕಳೆದ ವಾರ ಸಮೀಕ್ಷೆ ನಡೆಸಿದಾಗ 2,500 ಜೋಡಿಗಳ ಅಪ್ಲಿಕೇಶನ್ ನೋಂದಣಿಯಾಗಿತ್ತು. ಇದರ ಆಧಾರದಲ್ಲಿ ಸಮೀಕ್ಷೆ ನಡೆಸಿದಾಗ ಶೇ. 45 ಮದುವೆಗಳು ಮುಂದೂಡಿಕೆ ಅಥವಾ ರದ್ದಾಗಿರುವುದು ಖಚಿತಪಟ್ಟಿದೆ. ಶೇ.55 ಮದುವೆ ನಡೆಸುವ ಹಾಗೂ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿದ್ದಾರೆ. 2019ರ ಏಪ್ರಿಲ್ನಿಂದ ಜೂನ್ವರೆಗೆ ದೇಶದಲ್ಲಿ 25 ಲಕ್ಷಕ್ಕೂ ಅಧಿಕ ಮದುವೆ ನಡೆದಿದ್ದವು. ಆದರೆ, ಈ ವರ್ಷ ಕರೊನಾದಿಂದಾಗಿ 10 ಲಕ್ಷಕ್ಕೂ ಅಧಿಕ ವಿವಾಹಗಳು ರದ್ದು, ಅಥವಾ ಮುಂದೂಡಿಕೆ ಆಗಿವೆ.