ಕೊರೋನಾ ವಿರುದ್ಧ ಒಗ್ಗಟ್ಟಿನ ಹೋರಾಟದ ಪ್ರತೀಕವಾಗಿ ಏ.5ರಂದು ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ಎಲ್ಲ ದೀಪ ಆರಿಸಿ, ಮನೆಯ ಬಾಗಿಲಲ್ಲಿ ನಿಂತು ಮೊಂಬತ್ತಿ, ಟಾರ್ಚ್ ಅಥವಾ ಮೊಬೈಲ್ ಟಾರ್ಚ್ ಬಳಸಿ ಪ್ರಕಾಶಮಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ .
ಈ ಸಂದರ್ಭ ಯಾರೂ ರಸ್ತೆ, ಗಲ್ಲಿಗಳಲ್ಲಿ ಗುಂಪು ಸೇರಬೇಡಿ, ಮನೆಯೊಳಗೆ ಅಥವಾ ಬಾಲ್ಕನಿಯಲ್ಲೇ ನಿಂತು ಬೆಳಕು ತೋರಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ಸಾಮಾಜಿಕ ಅಂತರ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
21 ದಿನಗಳ ಲಾಕ್‌ಡೌನ್ ಏಪ್ರಿಲ್ 14ಕ್ಕೆ ಅಂತ್ಯಗೊಳ್ಳಲಿದೆ. ಬಳಿಕ ಮುಂದಿನ ಹೆಜ್ಜೆಯೇನು ಎಂಬುದರ ಬಗ್ಗೆ ವಿಡಿಯೋ ಸಂದೇಶದಲ್ಲಿ ವಿವರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ, ಲಾಕ್‌ಡೌನ್ ಏ,14ಕ್ಕೆ ಅಂತ್ಯಗೊಳ್ಳಲಿದೆ. ಇಷ್ಟು ದಿನ ಮನೆಯಲ್ಲೇ ಇರುವ ಜನತೆ ಒಮ್ಮೆಲೆ ರಸ್ತೆಗೆ ಇಳಿಯುವ, ವಹಿವಾಟು ನಡೆಸುವ ಸಾಧ್ಯತೆ ಇರುತ್ತದೆ. ಅಂತಹ ಜನದಟ್ಟಣೆ ತಡೆಯಲು ಜನ ಸಂಚಾರ ಸ್ವರೂಪದ ಕುರಿತು ಒಮ್ಮತದ ಯೋಜನೆ ರೂಪಿಸಿ ಎಂದು ರಾಜ್ಯಗಳಿಗೆ ಸೂಚಿಸಿದರು.