Sunday, June 7, 2026
Homeಕರಾವಳಿಮಂಗಳೂರುಮಂಗಳೂರು: ನಕಲಿ ಟ್ರೇಡಿಂಗ್ ವೆಬ್‌ಸೈಟ್ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

ಮಂಗಳೂರು: ನಕಲಿ ಟ್ರೇಡಿಂಗ್ ವೆಬ್‌ಸೈಟ್ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬರು ನಕಲಿ ಟ್ರೇಡಿಂಗ್ ವೆಬ್‌ಸೈಟ್ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ನಗರದ ನಿವಾಸಿ ಕಳೆದ ಡಿಸೆಂಬರ್‌ನಲ್ಲಿ ಫೇಸ್‌ಬುಕ್‌ನಲ್ಲಿ ‘ಟ್ರೇಡಿಂಗ್’ ಕುರಿತಾದ ಜಾಹೀರಾತನ್ನು ನೋಡಿ ಆಸಕ್ತಿ ತಳೆದಿದ್ದರು. ಆ ಲಿಂಕ್‌ನಲ್ಲಿ ತಮ್ಮ ವಿವರಗಳನ್ನು ನಮೂದಿಸಿದ ಬೆನ್ನಲ್ಲೇ, ಸಿದ್ದಾರ್ಥ ವಿಪಲ್ ಎಂಬಾತ ವಿದೇಶಿ ಮೊಬೈಲ್ ಸಂಖ್ಯೆಯಿಂದ (+447454431206) ವಾಟ್ಸಪ್ ಮೂಲಕ ಸಂವಹನ ನಡೆಸಿದ್ದಾನೆ. https://bullontrade.com ಎಂಬ ವೆಬ್‌ಸೈಟ್‌ನಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಬರುವುದಾಗಿ ನಂಬಿಸಿದ್ದಾನೆ.

ಆರಂಭದಲ್ಲಿ ಹೂಡಿಕೆ ಮಾಡಿದ ₹69,000 ಮೊತ್ತಕ್ಕೆ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಲಾಭ ತೋರಿಸಲಾಗಿದೆ. ಇದನ್ನು ನಂಬಿದ ಸಂತ್ರಸ್ತರಿಗೆ ‘ಡಿಜಿಟಲ್ ಗೋಲ್ಡ್ ಮಾರ್ಕೆಟ್’ ಮತ್ತು ‘ನೆಸ್‌ಡಾಕ್’ (Nasdaq) ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಲಾಗಿದೆ. ವಂಚಕನ ಮಾತಿಗೆ ಮರುಳಾದ ಸಂತ್ರಸ್ತರು ಕಂಕನಾಡಿ ಬ್ಯಾಂಕ್ ಶಾಖೆಯಿಂದ RTGS ಮತ್ತು NEFT ಮೂಲಕ ವಿವಿಧ ಖಾತೆಗಳಿಗೆ ಒಟ್ಟು ₹11,80,000 ವರ್ಗಾಯಿಸಿದ್ದಾರೆ. ವೆಬ್‌ಸೈಟ್‌ನಲ್ಲಿ ಸಂತ್ರಸ್ತರ ಖಾತೆಗೆ 76,528 USDT (ಅಂದಾಜು ₹63 ಲಕ್ಷಕ್ಕೂ ಹೆಚ್ಚು) ಲಾಭ ಬಂದಿರುವುದು ಕಂಡುಬಂದಿದೆ. ಆದರೆ, ಈ ಹಣವನ್ನು ಹಿಂಪಡೆಯಲು (Withdraw) ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಸಿದ್ದಾರ್ಥನನ್ನು ವಿಚಾರಿಸಿದಾಗ, “ಲಾಭದ ಮೊತ್ತ ಬಿಡುಗಡೆ ಮಾಡಲು ಮೊದಲು 15% ತೆರಿಗೆ ಹಣ ಪಾವತಿಸಬೇಕು” ಎಂದು ಹೊಸ ಕಥೆ ಹೇಳಿದ್ದಾನೆ.

ಸಂತ್ರಸ್ತರು ಹಣ ಪಾವತಿಸುವ ಮುನ್ನ ಜಿಎಸ್‌ಟಿ (GST) ದಾಖಲೆಗಳನ್ನು ಕೇಳಿದಾಗ ವಂಚಕರು ನೀಡಲು ನಿರಾಕರಿಸಿದ್ದಾರೆ. ಇದರಿಂದ ತಾನು ವಂಚನೆಗೊಳಗಾಗಿರುವುದು ಸಂತ್ರಸ್ತರಿಗೆ ಮನವರಿಕೆಯಾಗಿದೆ.
ಒಟ್ಟು ₹12,49,000 ಹಣ ಕಳೆದುಕೊಂಡಿರುವ ಸಂತ್ರಸ್ತರು ಇದೀಗ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ವೆಬ್‌ಸೈಟ್ ಸೃಷ್ಟಿಸಿ, ಹೂಡಿಕೆಯ ಹೆಸರಲ್ಲಿ ಜನರನ್ನು ನಂಬಿಸಿ ವಂಚಿಸುತ್ತಿರುವ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!