Monday, June 29, 2026
HomeUncategorizedಮಂಗಳೂರು: ಸಿನಿಮೀಯ ಶೈಲಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ದರೋಡೆ; ಕಾರು, ಚಿನ್ನದೊಂದಿಗೆ ದುಷ್ಕರ್ಮಿಗಳು ಪರಾರಿ!

ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ದರೋಡೆ; ಕಾರು, ಚಿನ್ನದೊಂದಿಗೆ ದುಷ್ಕರ್ಮಿಗಳು ಪರಾರಿ!

- Advertisement -
- Advertisement -

ಮಂಗಳೂರು: ಸುರತ್ಕಲ್ ಬಳಿಯ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಸುಕಿನ ಜಾವ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ದರೋಡೆಕೋರರ ತಂಡವು ಕಾರಿನಲ್ಲಿದ್ದ ಅಂದಾಜು ₹20 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದಿನೊಂದಿಗೆ ಪರಾರಿಯಾಗಿದೆ.

ಕೇರಳದ ಪಯ್ಯನ್ನೂರು ನಿವಾಸಿಯಾದ ವಿಕಾಸ್ ಎಂಬ ಚಿನ್ನದ ವ್ಯಾಪಾರಿ ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಸ್ವಿಫ್ಟ್ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ, ಇಂದು ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಬೈಕಂಪಾಡಿ ದ್ವಾರದ ಬಳಿ ಈ ಕೃತ್ಯ ನಡೆದಿದೆ.ಎರಡು ಇನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ ದರೋಡೆಕೋರರ ಜಾಲ, ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದೆ. ತಕ್ಷಣವೇ ಕಾರಿನಲ್ಲಿದ್ದ ವಿಕಾಸ್ ಅವರನ್ನು ಬಲವಂತವಾಗಿ ಕೆಳಗೆ ಇಳಿಸಿದ ತಂಡ, ಅವರ ಕಾರನ್ನು ಅಪಹರಿಸಿದೆ.

ಕಾರನ್ನು ವಶಕ್ಕೆ ಪಡೆದ ದುಷ್ಕರ್ಮಿಗಳು, ಅದರಲ್ಲಿದ್ದ ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಕಾರಿನಲ್ಲೇ ಕೂರಿಸಿಕೊಂಡಿದ್ದಾರೆ. ತದನಂತರ ಸ್ವಲ್ಪ ದೂರದ ಕುಳೂರು ಬಳಿ ಅವರಿಬ್ಬರನ್ನು ಕಾರಿನಿಂದ ಹೊರದೂಡಿ, ಕಾರಿನಲ್ಲಿದ್ದ ಚಿನ್ನ ಮತ್ತು ನಗದಿನೊಂದಿಗೆ ದರೋಡೆಕೋರರು ಕ್ಷಣಾರ್ಧದಲ್ಲಿ ಮಾಯವಾಗಿದ್ದಾರೆ.

ದರೋಡೆಗೊಳಗಾದ ಒಟ್ಟು ಚಿನ್ನ ಹಾಗೂ ನಗದಿನ ಮೌಲ್ಯ ಸುಮಾರು ₹20 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

- Advertisement -

Latest News

error: Content is protected !!