Monday, June 29, 2026
HomeUncategorizedವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಬೃಹತ್ ಮರ ಹಾಗೂ ವಿದ್ಯುತ್ ಕಂಬ

ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಬೃಹತ್ ಮರ ಹಾಗೂ ವಿದ್ಯುತ್ ಕಂಬ

- Advertisement -
- Advertisement -

ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ವಿಟ್ಲ ಹೊರವಲಯದ ಪಡೀಬಾಗಿಲು ಸಮೀಪ ಸೋಮವಾರ ಬೆಳಗ್ಗೆ  ನಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೂ, ಒಳಗಿದ್ದ ದಂಪತಿ ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಬೆಳಗ್ಗೆ ಕುದ್ದುಪದವು ಕಡೆಯಿಂದ ವಿಟ್ಲ ಕಡೆಗೆ ಸ್ವಿಫ್ಟ್ ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.


ಪಡೀಬಾಗಿಲು ಸಮೀಪ ಕಾರು ಚಲಿಸುತ್ತಿದ್ದಂತೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಮೊದಲು ವಿದ್ಯುತ್ ತಂತಿ ಹಾಗೂ ಕಂಬದ ಮೇಲೆ ಉರುಳಿಬಿದ್ದಿದೆ. ಮರದ ಭಾರಕ್ಕೆ ವಿದ್ಯುತ್ ತಂತಿ ಜಗ್ಗಿದ ಪರಿಣಾಮ, ಅದರ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬವೂ ಬೇರುಸಹಿತ ಕಿತ್ತುಕೊಂಡು ಹೆದ್ದಾರಿಯಲ್ಲಿ ಸರಿಯಾಗಿ ಸಾಗುತ್ತಿದ್ದ ಸ್ವಿಫ್ಟ್ ಕಾರಿನ ಮುಂಭಾಗದ ಮೇಲೆ ಬಿದ್ದಿದೆ. ಮರ ಮತ್ತು ಕಂಬ ಒಟ್ಟಿಗೇ ಮೇಲಕ್ಕೆ ಬಿದ್ದಿದ್ದರಿಂದ ಕಾರಿನ ಬಾನೆಟ್ ಭಾಗ ನಜ್ಜುಗುಜ್ಜಾಗಿದೆ.

ಘಟನೆಯಿಂದಾಗಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಕೆಲಕಾಲ ಸ್ಥಗಿತವಾಗಿತ್ತು. ಹೆದ್ದಾರಿ ಮಧ್ಯೆಯೇ ಮರ ಮತ್ತು ಕಂಬ ಬಿದ್ದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮರವನ್ನು ಕತ್ತರಿಸಿ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತೆ ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!