
ಕುಂದಾಪುರ: ಚರ್ಚ್ ರಸ್ತೆಯಲ್ಲಿ ಜುಲೈ 31ರಂದು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ನಿವಾಸಿ ಆರೋಪಿ ಡೆರಿಕ್ ಕ್ರಾಸ್ಟಾ (55) ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ಭಾನುವಾರದಂದು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ತೀರ್ಪಿನ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಸುದೀರ್ಘ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಪೊಲೀಸ್ ತನಿಖೆಯ ಪ್ರಕಾರ, ಈ ಗುಂಡಿನ ದಾಳಿ ಘಟನೆಯು ಹಣಕಾಸಿನ ವಿಚಾರದಲ್ಲಿ ಉಂಟಾದ ತೀವ್ರ ಗಲಾಟೆಯಿಂದ ನಡೆದಿದೆ. ಗಲಾಟೆಯ ಸಂದರ್ಭದಲ್ಲಿ ಆರೋಪಿ ಡೆರಿಕ್ ಕ್ರಾಸ್ತಾ, ಐವನ್ ರಿಚರ್ಡ್ ಮಸ್ಕರೇನಸ್ (45) ಎಂಬವರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದ. ತೊಡೆಗೆ ತೀವ್ರ ಗಾಯಗೊಂಡಿದ್ದ ಐವಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಷ್ಟರಲ್ಲೇ ಆರೋಪಿ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಆರೋಪಿಯ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ತನಿಖಾ ತಂಡವು ಶನಿವಾರ ಮಧ್ಯಾಹ್ನ ಭಟ್ಕಳದ ಬೆಳಕೆ ಸಮೀಪ ಆರೋಪಿ ಡೆರಿಕ್ ಕ್ರಾಸ್ಟಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧನದ ನಂತರ ನಡೆದ ವಿಚಾರಣೆ ವೇಳೆ, ಆರೋಪಿಯು ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರ ಹಾಗೂ ಕಾರನ್ನು ಬಾಂಚಿದ ಸ್ಥಳವನ್ನು ಬಾಯ್ಬಿಟ್ಟಿದ್ದಾನೆ. ಆತನ ನೀಡಿದ ಮಾಹಿತಿಯನ್ನಾಧರಿಸಿ, ಉಡುಪಿ ಜಿಲ್ಲೆಯ ಶಿರೂರು ಗಡಿ ಭಾಗದ ನಿರ್ಜನ ಅರಣ್ಯ ಪ್ರದೇಶದಲ್ಲಿಟ್ಟಂತಹ ಬಂದೂಕು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇದು ಪ್ರಮುಖ ಸಾಕ್ಷ್ಯವಾಗಲಿದೆ.
ಕುಂದಾಪುರ ಟೌನ್ ಇನ್ಸ್‌ಪೆಕ್ಟರ್ ಜಯರಾಮ್ ಗೌಡ ನೇತೃತ್ವದ ತನಿಖಾ ತಂಡವು ಭಾನುವಾರ ಘಟನಾ ಸ್ಥಳದಲ್ಲಿ ಮಹಜರು ನಡೆಸಿದೆ. ಸಬ್-ಇನ್ಸ್‌ಪೆಕ್ಟರ್ ನಂಜಾ ನಾಯಕ್, ಪೊಲೀಸ್ ಸಿಬ್ಬಂದಿ ಹಾಗೂ ಅಪರಾಧ ಸ್ಥಳ ಪರಿಶೀಲನಾ (SOCO) ತಂಡದ ನೆರವಿನೊಂದಿಗೆ ಈ ಮಹಜರು ಪ್ರಕ್ರಿಯೆ ಪೂರ್ಣಗೊಂಡಿದೆ.
ಲಭ್ಯವಿರುವ 5 ದಿನಗಳ ಕಸ್ಟಡಿ ಅವಧಿಯಲ್ಲಿ ಘಟನೆಯ ಸಂಪೂರ್ಣ ಸರಣಿ, ಹಿನ್ನೆಲೆ ಹಾಗೂ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.


