ಮಂಗಳೂರು: ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯನ್ನು ಜನಪರವಾಗಿ ರೂಪಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಿಪಿಎಂ ಸಮಿತಿಗಳ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಕಾರ್ಪೊರೇಟ್ ಪರವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿಗೆ ಬದಲಾಗಿ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ವಸತಿ ಸೇರಿದಂತೆ ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡುವ ಅಭಿವೃದ್ಧಿ ನೀತಿ ರೂಪಿಸಬೇಕು ಎಂದು ಸಿಪಿಎಂ ಒತ್ತಾಯಿಸಿತು. ಸಚಿವ ಸಂಪುಟ ಸಭೆಗೆ 21 ವಿವಿಧ ಬೇಡಿಕೆಗಳನ್ನು ಒಳಗೊಂಡ ಆಗ್ರಹ ಪತ್ರ ಸಲ್ಲಿಸಲು ಸಿಪಿಎಂ ಕಾರ್ಯಕರ್ತರು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದರು. ಮೆರವಣಿಗೆಗೂ ಮುನ್ನ ಬೆಂದೂರ್‌ವೆಲ್ ವೃತ್ತದ ಬಳಿ ಧರಣಿ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸೇರಿದಂತೆ ಮುಖಂಡರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಳಿಕ ಆಗ್ರಹ ಪತ್ರ ಸಲ್ಲಿಸಲು ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ಬೆಂದೂರ್‌ವೆಲ್ ವೃತ್ತದ ಬಳಿ ಮೆರವಣಿಗೆಯನ್ನು ತಡೆದರು. ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ಈ ವೇಳೆ ವಾಹನದಲ್ಲಿಯೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.


