ತೆಕ್ಕಟ್ಟೆ: ಉಡುಪಿ ಲೋಕಾಯುಕ್ತ ಪೊಲೀಸರು ಸೆ.17ರಂದು ಬೇಳೂರು ಗ್ರಾಮ ಪಂಚಾಯಿತಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾ.ಪಂ. ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ ಎನ್ನಲಾಗಿದೆ.
ನಿವೇಶನಕ್ಕಾಗಿ 400ಕ್ಕೂ ಅಧಿಕ ಮಂದಿಯಿಂದ ಅರ್ಜಿ ಸ್ವೀಕರಿಸಿರುವುದು, ಕಟ್ಟಡ ಪರವಾನಿಗೆಯಲ್ಲಿನ ಲೋಪ ಹಾಗೂ ಮೊಬೈಲ್ ಟವರ್ಗಳ ತೆರಿಗೆ ಸಂಗ್ರಹಿಸದಿರುವ ಕುರಿತು ದೂರುಗಳು ಬಂದಿದ್ದವು. ಗ್ರಾ.ಪಂ. ವಾಣಿಜ್ಯ ಕಟ್ಟಡದಲ್ಲಿದ್ದ ಗ್ರಾಮ ಒನ್ ಅಂಗಡಿ ಮಾಲಕರಿಂದ ಸುಮಾರು ₹1.17 ಲಕ್ಷ ಬಾಡಿಗೆ ಬಾಕಿ ಉಳಿದಿರುವುದು ಸೇರಿದಂತೆ ಪಂಚಾಯಿತಿಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳ ಬಗ್ಗೆಯೂ ದೂರು ನೀಡಲಾಗಿತ್ತು. ಅಕ್ರಮ ಮರಳುಗಾರಿಕೆ ಹಾಗೂ ಶಿಲೆಕಲ್ಲು ಗಣಿಗಾರಿಕೆ ಕುರಿತ ಆರೋಪಗಳನ್ನೂ ಲೋಕಾಯುಕ್ತರು ಪರಿಶೀಲಿಸಿದ್ದಾರೆ.
ಉಪ ಲೋಕಾಯುಕ್ತರ ಲಿಖಿತ ಆದೇಶದ ಮೇರೆಗೆ, ಲೋಕಾಯುಕ್ತ ಎಸ್ಪಿ ನಿರ್ದೇಶನದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಸಾರ್ವಜನಿಕ ದೂರುಗಳ ಆಧಾರದ ಮೇಲೆ ನಡೆದ ಈ ಕ್ರಮವು ಜಿಲ್ಲೆಯ ಗ್ರಾಮ ಪಂಚಾಯಿತಿ ಕಚೇರಿಯೊಂದರ ಮೇಲೆ ನಡೆದ ಮೊದಲ ಲೋಕಾಯುಕ್ತ ದಾಳಿ ಎಂದು ತಿಳಿಸಲಾಗಿದೆ.


