ಉತ್ತರಪ್ರದೇಶ: ಗೆಳೆಯನ ಅಂಡರ್ ವೇರ್ ಕದ್ದು ಧರಿಸಿದ್ದಕ್ಕೆ ಯುವಕನೊಬ್ಬ ಗೆಳೆಯನನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ವಿವೇಕ್ ಎಂದು ಗುರುತಿಸಲಾಗಿದೆ. ಈತನನ್ನು ಸಹೋದ್ಯೋಗಿ ಅಜಯ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್ ಹಾಗೂ ಅಜಯ್ ಗುರುವಾರ ಒಂದೇ ರೂಂನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ವಿವೇಕ್ ಅಜಯ್ ನ ಅಂಡರ್ ವೇರ್ ಆತನಿಗೆ ಹೇಳದೇ ಧರಿಸಿದ್ದಾನೆ. ಇದನ್ನು ಅಜಯ್ ಗಮನಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಒಳ ಉಡುಪು ವಿಚಾರವಾಗಿ ಅಜಯ್ ಹಾಗೂ ವಿವೇಕ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಜಯ್ ಅಲ್ಲೇ ಇದ್ದ ತರಕಾರಿ ಕಟ್ ಮಾಡುವ ಚಾಕು ತೆಗೆದುಕೊಂಡು ವಿವೇಕ್ ಗೆ ಇರಿದಿದ್ದಾನೆ. ಘಟನೆಯಿಂದ ವಿವೇಕ್ ಗಂಭೀರ ಗಾಯಗೊಳ್ಳುತ್ತಿದ್ದಂತೆಯೇ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಘಟನೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕ್ ನನ್ನು ಇನ್ನೊಬ್ಬ ಸಹೋದ್ಯೋಗಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಸದೇ ವಿವೇಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಸಂಬಂಧಿಸಿದಂತೆ ಆರೋಪಿ ಅಜಯ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಫ್ಯಾಕ್ಟರಿ ಮಾಲೀಕ ಹಾಗೂ ಕೆಲಸ ಸಹೋದ್ಯೋಗಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.