ರಾಯಗಢ: ಪ್ರೀತಿಯ ನಶೆ ಏನೆಲ್ಲಾ ಆಟ ಆಡಿಸುತ್ತೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ, ಹೀಗೆ ಅತಿಯಾದ ಪ್ರೀತಿಯ ಗುಂಗಿನಲ್ಲಿದ್ದ ಯುವಕನೊಬ್ಬ ತನ್ನ ಪ್ರೇಯಸಿಗಾಗಿ ಬ್ಯಾಂಕ್ ಗೇ ಕನ್ನ ಹಾಕಿ ಇದೀಗ ಜೈಲು ಸೇರಿದ್ದಾನೆ.
ರಾಯಗಢದ ಚರಖಾಪುರ ನಿವಾಸಿಯಾದ ಶಂಕರ್ ರಾಠಿಯ ತನ್ನ ಪ್ರೇಯಸಿ ಖುಷಿಗಾಗಿ ಬ್ಯಾಂಕಿಗೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ. ಬ್ಯಾಂಕಿನಿಂದ ಕಳ್ಳತನ ಮಾಡುವಲ್ಲಿ ಯಶಸ್ವಿಯೂ ಆಗಿದ್ದ ಈತ ಅಲ್ಲಿಂದ 11.55 ಲಕ್ಷ ರೂ. ಎಗರಿಸಿದ್ದ. ಅಕ್ಟೋಬರ್ 8ರಂದು ಪತ್ತಲ್ಗ್ರಾಮದ ಎಸ್ಬಿಐ ಬ್ಯಾಂಕಿನ ಹಿಂಭಾಗದ ಗೋಡೆಗೆ ಕನ್ನ ಹಾಕಲಾಗಿತ್ತು. ಬೆಳಗ್ಗೆ ಬ್ಯಾಂಕಿಗೆ ಬಂದ ಅಧಿಕಾರಿಗಳು ಕನ್ನ ಹಾಕಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಂತರ ಪರೀಕ್ಷಿಸಿದ್ದಾಗ ಬ್ಯಾಂಕಿನಲ್ಲಿ ಒಟ್ಟು 11.5 ಲಕ್ಷ ರೂ. ನಗದು ಕಳ್ಳತನವಾಗಿರುವುದು ತಿಳಿದುಬಂದಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಬ್ಯಾಂಕ್ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಅದರಲ್ಲಿ ಶಂಕರ್ ಚಲನವಲನ ಸೆರೆಯಾಗಿತ್ತು.
ಆತನ ಪತ್ತೆಗೆ ಜಾಲ ಬೀಸಿದ್ದ ಪೊಲಿಸರಿಗೆ ಶಂಕರ್ ಸಿಕ್ಕಿಬಿದ್ದಿದ್ದ. ಆತ ಹೊಲದಲ್ಲಿ ಹಣವನ್ನು ಬಚ್ಚಿಟ್ಟಿದ್ದ.
ಪೊಲೀಸರು ತಮ್ಮದೇ ಧಾಟಿಯಲ್ಲಿ ವಿಚಾರಣೆ ಮಾಡಿದಾಗ ಎಲ್ಲಾ ವಿಷಯ ತಿಳಿಸಿದ್ದಾನೆ. ತನ್ನ ಪ್ರೇಯಸಿ ಹೆಚ್ಚು ಖರ್ಚು ಮಾಡುತ್ತಿದ್ದಳು. ಆಕೆಯ ಖರ್ಚಿಗಾಗಿ ಬ್ಯಾಂಕಿನಲ್ಲಿ ಕಳ್ಳತನ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಹಣವನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.


