ಚಿಕ್ಕಮಗಳೂರು: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರ ಕುಮಾರ್ ಅವರ ಅಂತ್ಯಸಂಸ್ಕಾರವು ಅವರ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಗುಗೊಳ್ಳಿಯಲ್ಲಿ ನೆರವೇರಿತು.
47 ವರ್ಷದ ಮಹೇಂದ್ರ ಕುಮಾರ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದರು. ಮಹೇಂದ್ರ ಕುಮಾರ್ ಅವರಿಗೆ ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಜಿಲ್ಲೆಯ ಬಜರಂಗದಳಕ್ಕೆ ಮಹೇಂದ್ರ ಕುಮಾರ್ ಅವರೇ ಭದ್ರಬುನಾದಿ ಹಾಕಿ ಕೊಟ್ಟವರು.
ಮಹೇಂದ್ರ ಅವರ ಪಾರ್ಥಿವ ಶರೀರವನ್ನ ಶನಿವಾರ ಸಂಜೆ 7:30ಕ್ಕೆ ಅಂಬುಲೆನ್ಸ್ ಮೂಲಕ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಸುಗೊಳ್ಳಿಯ ಸಹೋದರ ಸತೀಶ್ ಮನೆಗೆ ತರಲಾಯಿತು. ಸ್ನೇಹಿತರು ಕುಟುಂಬಸ್ಥರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿತ್ತು. ಮನೆ ಸಮೀಪದ ತೋಟದಲ್ಲಿ ಅಂತಿಮ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮಹೇಂದ್ರ ಕುಮಾರ್ ಅವರ ಪಾರ್ಥಿವ ಶರೀರ ಜಿಲ್ಲೆಗೆ ಬರುತ್ತಿದ್ದಂತೆ ಪ್ರತಿ ಊರುಗಳಲ್ಲೂ ಅವರ ಅಭಿಮಾನಿಗಳು ದರ್ಶನ ಪಡೆದು ಕಂಬನಿ ಮಿಡಿದರು. ಸಚಿವ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಶೃಂಗೇರಿ ಶಾಸಕ ಟಿ.ಡಿರಾಜೇಗೌಡ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ನೂರಾರು ಜನ ಅಂತಿಮ ದರ್ಶನ ಪಡೆದರು.