
ಮಂಗಳೂರು; ವಿದ್ಯುತ್ ದೋಷ ಸರಿಪಡಿಸಲು ಟ್ರಾನ್ಸ್ ಫಾರ್ಮರ್ ಏರಿದ್ದ ಮೆಸ್ಕಾಂ ಲೈನ್‌ಮ್ಯಾನ್‌ರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ನಡೆದಿದೆ.
ಅಂಬಿಕಾರೋಡ್ ಪಿಲಾರು ನಿವಾಸಿ ಶೇಖ್ ಝಮೀರ್ (49) ಮೃತಪಟ್ಟ ಮೆಸ್ಕಾಂ ನೌಕರ. ಇವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಘಟನೆಯ ವಿವರ: ಉಚ್ಚಿಲ ನಯಾಪಟ್ಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಝಮೀರ್ ಅವರು ಸಹೋದ್ಯೋಗಿ ಸಂಗಪ್ಪ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜಿಒಎಸ್ (GOS) ಆಫ್ ಆಗಿದೆ ಎಂದು ಭಾವಿಸಿ ಝಮೀರ್ ಟ್ರಾನ್ಸ್‌ಫಾರ್ಮರ್ ಏರಿದ್ದಾರೆ. ಆದರೆ ವಿದ್ಯುತ್ ಪ್ರವಾಹ ಸ್ಥಗಿತಗೊಳ್ಳದ ಕಾರಣ, ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಮೇಲಿಂದ ಕೆಳಗೆ ಬಿದ್ದಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


