ಬಂಟ್ವಾಳ: ಇಲ್ಲಿನ ಕೃಷಿಕರೊಬ್ಬರ ಮನೆ ಆವರಣಕ್ಕೆ ಜುಲೈ 17 ರಂದು ತಡರಾತ್ರಿ 11:30 ರ ಸುಮಾರಿಗೆ ಚಿರತೆಯೊಂದು ನುಗ್ಗಿ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಮೂಡನಡುಗೋಡು ಗ್ರಾಮದ ಬಾಬತೋಟದ ನಿವಾಸಿ ಪ್ರಕಾಶ್ ಪೂಜಾರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಚಿರತೆಯೊಂದು ನುಗ್ಗಿ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದಾಗ ನಾಯಿಗಳು ಜೋರಾಗಿ ಬೊಗಳಿದ ಕಾರಣ ಚಿರತೆ ಓಡಿಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಚಿರತೆ ಬಂದ ಸಮಯದಲ್ಲಿ, ಮನೆಯಲ್ಲಿದ್ದ ಎರಡು ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದ್ದು, ಆ ವೇಳೆ ಪ್ರಕಾಶ್ ಹೊರಗೆ ಪರಿಶೀಲಿಸಲು ಹೊರಟಾಗ ಕುಟುಂಬ ಸದಸ್ಯರು ಭಯದಿಂದ ಅವರನ್ನು ತಡೆದಿದ್ದಾರೆ. ಚಿರತೆಯು ನಾಯಿಗಳ ಮೇಲೆ ಎರಗಿ ಓಡಿ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು ಚಿರತೆಯು ನಾಯಿಯ ಮೇಲೆ ದಾಳಿಯ ಮಾಡಿದ್ದು, ಒಂದು ನಾಯಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಯವರು ಇದನ್ನು ನಾಯಿಗಳ ನಡುವಿನ ಜಗಳವೆಂದೆ ಭಾವಿಸಿದ್ದು, ನಂತರದಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಬಂದಿರುವುದು ಕಂಡುಬಂದಿದೆ. ಈಗಾಗಲೇ ಚಿರತೆ ಬಂದಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅವರು ಪಟಾಕಿ ಸಿಡಿಸಿ ಓಡಿಸುವಂತೆ ಮಾತ್ರ ಸಲಹೆ ನೀಡಿದ್ದಾರೆ ಎಂದು ಪ್ರಕಾಶ್ ಪೂಜಾರಿ ತಿಳಿಸಿದ್ದಾರೆ.


