ಉತ್ತರ ಪ್ರದೇಶದ ಬರಾಬಂಕಿಯ ಸೂರತ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯೊಬ್ಬಳು ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ವೈದ್ಯರನ್ನು ಅಚ್ಚರಿಗೊಳಿಸಿದೆ. ಮಹಿಳೆಗೆ ಏಳನೇ ತಿಂಗಳೇ ಹೆರಿಗೆಯಾದ ಕಾರಣ ಶಿಶುಗಳನ್ನು ಎನ್‌ಐಸಿಯುನಲ್ಲಿ ಇರಿಸಲಾಗಿದೆ.
ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಲಕ್ನೋಗೆ ಶಿಫ್ಟ್ ಮಾಡುವುದಾಗಿ ವೈದ್ಯರು ಹೇಳಿದ್ದಾರೆ. ಅನಿತಾ ಗೌತಮ್ ಎಂಬಾಕೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಿಗ್ಗೆ ಬಾತ್ ರೂಮಿಗೆ ಹೋಗಿದ್ದ ಅನಿತಾಗೆ ಅಲ್ಲಿಯೇ ನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಒಂದು ಮಗುವಿಗೆ ಜನ್ಮ ನೀಡಿದ್ದರಂತೆ. ತಕ್ಷಣ ಆಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆತರಲಾಗಿತ್ತಂತೆ.
ಬೆಳಿಗ್ಗೆ 8 ಗಂಟೆಗೆ ಮತ್ತೆ ನಾಲ್ಕು ಮಕ್ಕಳು ಜನಿಸಿವೆ. ಇದು ಅಕಾಲಿಕ ಹೆರಿಗೆಯಾದ ಕಾರಣ ರಕ್ತನಾಳಗಳು, ಮೆದುಳು, ಶ್ವಾಸಕೋಶಗಳು, ಕಣ್ಣುಗಳು ಮತ್ತು ಹೃದಯದ ಸಂಪೂರ್ಣ ಬೆಳವಣಿಗೆ ಹೊಂದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಂದು ಮಗು ತಲೆಗೆ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.