ಮಂಗಳೂರು:ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣವು ದಿನದಿಂದ ದಿನಕ್ಕೆ ಮಹತ್ವದ ತಿರುವನ್ನು ಪಡೆಯುತ್ತಿದೆ. ಇದೀಗ ಈ ದರೋಡೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭರತ್ ಶೆಟ್ಟಿ ದರೋಡೆಯಲ್ಲಿ ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ, ದರೋಡೆಕೋರರಿಗೆ ರಾಜಕೀಯ ಬೆಂಬಲವಿದೆ ಎನ್ನುವ ಸ್ಫೋಟಕ ಆರೋಪವನ್ನು ಮಾಡಿದ್ದಾರೆ.
ಅವರು ಮಾಧ್ಯಮಗಳ ಜೊತೆ ಮಾತನಾಡಿ, ದರೋಡೆಯಲ್ಲಿ ಸ್ಥಳೀಯರು ಶಾಮೀಲಾಗಿದ್ದು ಈ ಸ್ಥಳೀಯರಿಗೆ ರಾಜಕೀಯ ಬೆಂಬಲವಿದೆ. ದರೋಡೆ ಪ್ರಕರಣದಲ್ಲಿ 100% ಸ್ಥಳೀಯರು ಇರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ದರೋಡೆಕೋರರನ್ನು ಬಂಧಿಸಲಾಗಿದ್ದು, ಪ್ಲಾನಿಂಗ್ ಮಾಡಿದವರನ್ನು, ಕುಮ್ಮಕ್ಕು ನೀಡಿದವರನ್ನು ಯಾರೋ ಬಚಾವ್ ಮಾಡುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ದೂರಿದ್ದಾರೆ.
ಬೇರೆ ಪ್ರಕರಣಗಳಲ್ಲಿ ಭಾಗಿಯಾದವರು ಈಗ ದರೋಡೆ ಪ್ರಕರಣದಲ್ಲಿದ್ದು, ಈ ಕೃತ್ಯಕ್ಕೆ ಸಹಕಾರ ನೀಡಿದ ನೈಜ ಆರೋಪಿಗಳನ್ನು ಕಾಂಗ್ರೆಸ್ ಸರಕಾರ ಬಯಲಿಗೆ ತರಬೇಕು ಎಂದು ಭರತ್ ಶೆಟ್ಟಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.