ಕೇಪು ದೇವಸ್ಥಾನದ ಸಮೀಪವಿರುವ ಮಲರಾಯಿ, ಪಿಲಿಚಾಮುಂಡಿ ದೈವಸ್ಥಾನದ ಕೆಳಗಿನ ಗದ್ದೆಯಲ್ಲಿ ಕೊಂಬು ಜಾತ್ರೋತ್ಸವ ನಡೆದ ಐದನೇ ದಿನದಿಂದ ಆರಂಭವಾಗಿ ಮೂರು ದಿನಗಳಲ್ಲಿ ನಡೆಯುವ ಕೋಳಿ ಅಂಕಕ್ಕೆ ಈ ವರ್ಷ ಕುತ್ತು ಬಂದಿದೆ. ದೇವಸ್ಥಾನದಲ್ಲಿ ಬೆಟ್ಟಿಂಗ್ ಮುಕ್ತವಾಗಿ, ರಾಜರ ಕಾಲದಿಂದಲೂ ನೂರಾರು ವರ್ಷಗಳಿಂದ ನಡೆಯುತ್ತಿದ್ದ ಕೇಪು ಕುಕ್ಕುಟ ಕದನಕ್ಕೆ ಈ ವರ್ಷ ಕುತ್ತು ಬಂದಿರುವುದರಿಂದ ಭಕ್ತರಿಗೆ ನಿರಾಸೆಯಾಗಿದೆ.
ಕಾಲಾವಧಿಯಂತೆ ದೇವಸ್ಥಾನದ ವಠಾರದಲ್ಲಿ ಕೋಳಿಗೂಟ(ಕೋರಿಗೂಂಟ)ನಡೆಯಬೇಕಿದ್ದು, ಪೊಲೀಸ್ ಇಲಾಖೆಯು ಈ ಬಾರಿ ಕೇವಲ ಸಾಂಕೇತಿಕವಾಗಿ ಪಾರಂಪರಿಕ ನಂಬಿಕೆಗೆ ಚ್ಯುತಿ ಬಾರದಂತೆ ಮಾಡಿ ಮುಗಿಸಬೇಕೆಂದು ತಾಕೀತು ಮಾಡಿದ್ದು, ಯಥಾನುಪ್ರಕಾರ ಇದನ್ನು ಅನುಷ್ಠಾನಗೊಳಿಸಲು ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಳಿ ಅಂಕಗಳಲ್ಲಿ ನಡೆಯುವ ಬೆಟ್ಟಿಂಗ್, ಅವ್ಯವಹಾರ, ಹಲ್ಲೆ, ಕಾಳಗ ಇನ್ನಿತರ ಅಪರಾಧಿಕೃತ್ಯಗಳು ಅವ್ಯಾಹತವಾಗಿ ನಡೆಯುತ್ತವೆ ಎಂದು ಪರಿಗಣಿಸಿ ನಿರ್ಬಂಧ ಕಠಿಣಗೊಳಿಸಿದ್ದಾರೆ.
ಆಚರಣೆ, ಸಂಪ್ರದಾಯ, ನಿಯಮಗಳಿಗೆ ಬದ್ಧವಾಗಿ ನಡೆದುಕೊಂಡು ಬಂದ ಕುಕ್ಕುಟ ಕದನ ತನ್ನ ಮೂಲ ಸ್ವರೂಪವನ್ನು ಬದಲಾಯಿಸಿ ಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿರುವುದು ಸಹಸ್ರಾರು ಮಂದಿಗೆ ನಿರಾಸೆ ತಂದಿದ್ದು, ಈ ಬಾರಿ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಕೋಳಿಗೂಟ ಮಾತ್ರ ನಡೆಯಲು ಅವಕಾಶವಿದೆ ಎಂದು ಕೃಷ್ಣಯ್ಯ ಬಲ್ಲಾಳ್, ವಿಟ್ಲ ಅರಮನೆ ತಿಳಿಸಿದ್ದಾರೆ.


