ಕಾಸರಗೋಡು: ಜಿಲ್ಲೆಯ ನೀಲೇಶ್ವರ ಸಮೀಪದ ಮಡಿಕೈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಗುವಿನದೊಂದಿಗೆ ತಾಯಿ ಬಾವಿಗೆ ಹಾರಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮಡಿಕೈನ ಸುಧಾಕರ ಎಂಬವರ ಪತ್ನಿ ಬೀನಾಳು ತನ್ನ ಎರಡೂವರೆ ವರ್ಷದ ಪುತ್ರಿಯ ಸಹಿತ ಮನೆ ಅಂಗಳದಲ್ಲಿರುವ ಸುಮಾರು 30 ಅಡಿಯಷ್ಟು ಆಳದ ಬಾವಿಗೆ ಹಾರಿದ್ದರು. ಕೂಡಲೇ ಸ್ಥಳೀಯರು ಬಾವಿಗೆ ಇಳಿದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ನಂತರ ಕಾಞ೦ಗಾಡ್ ನಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಮಹಿಳೆಯನ್ನು ಮೇಲೆಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಕೃತ್ಯಕೆ ಕಾರಣ ತಿಳಿದು ಬಂದಿಲ್ಲ . ನೀಲೇಶ್ವರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


