ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ತಲಪಾಡಿಯ ಸಂಜೀವ ಬಂಗೇರ, ಪುತ್ತೂರಿನ ಉಲ್ಲಾಸ ಕೃಷ್ಣ ಪೈ ಮತ್ತು ಕೃಷ್ಣಪ್ಪ ಉಪ್ಪೂರು ಅವರು ಭಾಜನರಾಗಿದ್ದಾರೆ.
ಪುಸ್ತಕ ಬಹುಮಾನಕ್ಕೆ ಬೈಕಂಪಾಡಿಯ ಯೋಗೀಶ್ ಕಾಂಚನ್ ಅವರ ‘ತಞನ ಬೊಳ್ಳಿ’ ಕವನ ಸಂಕಲನ, ಕಾಸರಗೋಡಿನ ಅಕ್ಷತಾ ರಾಜ್ ಪೆರ್ಲ ಅವರ ‘ಬೇಲಿ, ಸಾಪೊದ ಕಣ್ಣ್’ ನಾಟಕ ಮತ್ತು ಡಾ.ಅಶೋಕ ಆಳ್ವ ಸುರತ್ಕಲ್ ಅವರ ‘ತುಳುನಾಡಿನ ಪ್ರಾಣಿ ಜಾನಪದ’ ಅಧ್ಯಯನ ಕೃತಿ ಆಯ್ಕೆಯಾಗಿರುತ್ತದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಗೌರವ ಪ್ರಶಸ್ತಿ’ಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ‘ಪುಸ್ತಕ ಬಹುಮಾನ’ವು ₹25 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹೊಂದಿದೆ ಎಂದು ಅವರು ವಿವರಿಸಿದರು. ಇನ್ನು ‘ಬಾಲ ಪ್ರತಿಭಾ ಪುರಸ್ಕಾರಕ್ಕೆ ಕೋಡಿಕೆರೆಯ ನಿರೀಕ್ಷಾ ಕೋಟ್ಯಾನ್, ಮುಂಬೈಯ ಜೀವಿಕಾ ಶೆಟ್ಟಿ, ಅಮೆರಿಕದ ಸಾನ್ವಿ, ಯುವ ಸಾಧಕ ಪುರಸ್ಕಾರಕ್ಕೆ ನಂದಳಿಕೆಯ ಹರಿಪ್ರಸಾದ್, ಮುಂಬೈಯ ಚಿನ್ಮಯಿ ಮೋಹನ್ ಸಾಲಿಯಾನ್, ಒಮಾನ್ ನ ರಮಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ.
ಮಾಧ್ಯಮ ಪುರಸ್ಕಾರಕ್ಕೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಶಶಿ ಬಂಡಿಮಾರ್, ಮುಂಬೈಯ ರೋನ್ಸ್ ಬಂಟ್ವಾಳ್, ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ಮುಂಬೈಯ ತುಳುಕೂಟ ಫೌಂಡೇಷನ್, ತುಳು ಕೂಟ ಕತಾರ್ ಆಯ್ಕೆಯಾಗಿರುತ್ತವೆ. ಈ ಪುರಸ್ಕಾರಗಳು ₹10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನವನ್ನು ಆಗಸ್ಟ್ 21ರಂದು ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಡಲಾಗುವುದು ಎಂದು ದಯಾನಂದ ಜಿ.ಕತ್ತಲ್ ಸಾರ್ ತಿಳಿಸಿದ್ದಾರೆ. ಅವರು ತುಳು ಸಂಶೋಧನೆಗೆ ಫೆಲೊಷಿಪ್ ನೀಡಲು ಅನುದಾನದ ಕೊರತೆ ಇದ್ದು, ಅದನ್ನು ನೀಗಿಸುವ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿನಿಮಾ ಮಂದಿರ ಒಳಗೊಂಡ ತುಳುಭವನ ಮತ್ತು ಬಯಲು ರಂಗಮಂದಿರ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಕವಿತಾ, ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಮತ್ತು ನಾಗೇಶ್ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರಿದ್ದರು.


