ಬೆಂಗಳೂರು : ಮಹಿಳೆಯ ಜೀವ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಮಹಿಳೆಯ ಗರ್ಭಪಾತಕ್ಕೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಹಿಳೆಯ ಗರ್ಭದಲ್ಲಿರುವ 22 ವಾರದ ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿದ್ದು, ಮಹಿಳೆಯ ಜೀವ ಮತ್ತು ಆರೋಗ್ಯಕ್ಕೆ ಸಮಸ್ಯೆಯಾಗಲಿದೆ ಎಂಬ ತಜ್ಞ ವೈದ್ಯರ ಸಲಹೆ ಪರಿಗಣಿಸಿ ಹೈಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿ ತೀರ್ಪು ನೀಡಿದೆ.
32 ವರ್ಷದ ಮಹಿಳೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್ ಗೆ ತುರ್ತು ಅರ್ಜಿ ಸಲ್ಲಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವರದಿಯಲ್ಲಿ ಭ್ರೂಣದ ಶ್ವಾಸಕೋಶ ಸರಿಯಾಗಿ ಬೆಳವಣಿಗೆಯಾಗಿಲ್ಲ. ಕರುಳಿಗೆ ರಕ್ತ ಸಂಚಲನವಿಲ್ಲ. ಹೃದಯವೂ ನ್ಯೂನತೆಯಿಂದ ಕೂಡಿದೆ. ಹೆರಿಗೆ ವೇಳೆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆ ಇದ್ದು, ತಾಯಿಯ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು.ಈ ಹಿನ್ನೆಲೆಯಲ್ಲಿ ಮಹಿಳೆ ಗರ್ಭಪಾತಕ್ಕೆ ಅನುಮತಿ ಕೋರಿದ್ದರು.
ಅರ್ಜಿ ವಿಚಾರಣೆ ನಡಡೆಸಿದ ನ್ಯಾ. ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠ, ಅರ್ಜಿದಾರ ಮಹಿಳೆಯು ತನ್ನ ಸ್ವಂತ ವೆಚ್ಚದಲ್ಲಿ ಗರ್ಭಪಾತ ಮಾಡಿಸಿಕೊಳ್ಳಬೇಕು. ಗರ್ಭಪಾತದಿಂದ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅರ್ಜಿದಾರರೇ ಹೊಣೆಯಾಗಿರಬೇಕು ಎಂದು ಸ್ಪಷ್ಟಪಡಿಸಿ ಗರ್ಭಪಾತಕ್ಕೆ ಅನುಮತಿ ನೀಡಿದೆ.