ಕಾರ್ಕಳ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದ ಮೇರೆಗೆ ದೈಹಿಕ ಶಿಕ್ಷಕರೊಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಮೂಲತಃ ಕಲಬುರಗಿ ನಿವಾಸಿಯಾಗಿರುವ ದೈಹಿಕ ಶಿಕ್ಷಕ ಮದರಸ್ ಎಸ್. ಮಕಾಂದಾರ್ ವಜಾಗೊಂಡ ಶಿಕ್ಷಕ. ಮದರಸ್ ಎಸ್. ಮಕಾಂದಾರ್ 2025ರ ಜೂನ್ ತಿಂಗಳಲ್ಲಿ ದೈಹಿಕ ಶಿಕ್ಷಕ ವೃತ್ತಿಗೆ ಅತಿಥಿ ಶಿಕ್ಷಕರಾಗಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರ್ಪಡೆಗೊಂಡಿದ್ದರು.
ಇವರು ವಿದ್ಯಾರ್ಥಿಗಳಿಗೆ 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಸೂಚಿಸುವುದು ಸಹಿತ ಮೊದಲಾದ ಶಿಕ್ಷೆಗಳನ್ನು ನೀಡುತ್ತಿದ್ದರು ಎಂದು ಮಕ್ಕಳು, ಪೋಷಕರು ಆರೋಪಿಸಿದ್ದಾರೆ.
ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದಾರ್‌ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಕಾಂದರ್‌ನನ್ನು ಪ್ರಾಂಶುಪಾಲರು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.


