ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ್ ಭಟ್ ನನ್ನ ಗುರುಗಳಲ್ಲ, ನನ್ನ ಗುರುಗಳು ಭಗವಾಧ್ವಜ ಎಂದು ಸಂಸದ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.
ಧರ್ಮಸ್ಥಳದ ಪ್ರಕರಣದಲ್ಲಿ ನಡೆಯುತ್ತಿರುವ ಎಸ್.ಐಟಿ ತನಿಖೆಯ ಪಕ್ಷದ ನಿಲುವಿಗೆ ನಾನು ಬದ್ಧನಾಗಿದ್ದು, ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾನು ತನಿಖೆಯ ಬಗ್ಗೆ ಯಾವುದೇ ರೀತಿಯ ಕಮೆಂಟ್ ಮಾಡುವುದಿಲ್ಲ ಎಂದು ಅವರು ತಿಳಿಸಿದರು. ಅದೇ ಸಂದರ್ಭದಲ್ಲಿ ಧರ್ಮಸ್ಥಳದ ಬಗ್ಗೆ ನಿಮ್ಮ ಗುರುಗಳಾದ ಕಲ್ಲಡ್ಕ ಪ್ರಭಾಕರ ಭಟ್ ಯಾಕೆ ಮಾತನಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಗುರು ಕಲ್ಲಡ್ಕ ಪ್ರಭಾಕರ್ ಭಟ್ ಅಂತ ಯಾರು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ನನ್ನ ಗುರು ಭಗವಾಧ್ವಜ, ಆರ್.ಎಸ್ ಎಸ್ ನ ಸ್ವಯಂ ಸೇವಕರು. ನಾವು ಹಿರಿಯರಿಗೆ ಗೌರವ ಕೊಡುತ್ತೇವೆ ಎಂದರು.
ಇನ್ನು ಧರ್ಮಸ್ಥಳ ಪ್ರಕರಣದ ಬಗ್ಗೆ ಉಡುಪಿ ಸಂಸದರು ಸದನದಲ್ಲಿ ಪ್ರಶ್ನೆ ಮಾಡಿದ್ದು, ಧರ್ಮಸ್ಥಳ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಈಗಾಗಲೇ ಆಗ್ರಹಿಸಲಾಗಿದೆ. ಕ್ಷೇತ್ರದ ಬಗ್ಗೆ ವಿಡಿಯೋ ಮಾಡಿದ್ದ ಯುಟ್ಯೂಬರ್ ಗಳಿಗೆ ಬೇರೆ ಬೇರೆ ಕಡೆಗಳಿಂದ ಹಣ ಬಂದಿದ್ದು, ಇದರ ಕುರಿತು ತನಿಖೆ ನಡೆಯುತ್ತಿದೆ. ಬಿಜೆಪಿ ಪಕ್ಷ ಹಾಗೂ ಜನಪ್ರತಿನಿಧಿಗಳ ನಿಲುವು ಧರ್ಮಸ್ಥಳ ವಿಚಾರದಲ್ಲಿ ಸ್ಪಷ್ಟವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಹಾಗೂ ಭಾವನೆಯ ಕೇಂದ್ರವಾಗಿದ್ದು, ಬೇರೆ ಯಾವುದೋ ಕೇಸ್ ಅನ್ನು ಇಟ್ಟುಕೊಂಡು ಶೃದ್ಧಾ ಕೇಂದ್ರಗಳ ಮೇಲೆ ಅಪಮಾನ ಮಾಡುವುದನ್ನು ಬಿಜೆಪಿ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದರು.
ಈಗಾಗಲೇ ವಿಧಾನಸಭೆಯಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆಯ ಬಗ್ಗೆ ಹರೀಶ್ ಪೂಂಜಾ ಅವರು ಪ್ರಸ್ತಾಪಿಸಿದ್ದು, ಶೃದ್ಧಾಕೇಂದ್ರಗಳ ವಿಚಾರದಲ್ಲಿ ಸೌಜನ್ಯ ತನಿಖೆಯನ್ನು ತರುವುದು ಸರಿಯಲ್ಲ. ಈ ರೀತಿಯ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದರು.


