ಕಡಬ: ಮಾವನೇ ಯುವತಿ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಕೋಡಿಂಬಾಳ ಗ್ರಾಮದ ಬಳ್ಳಿಕಜೆ ಎಂಬಲ್ಲಿ ನಡೆದಿದೆ. ಸೋನ್ವಿ (22) ಹಲ್ಲೆಗೊಳಗಾದ ಯುವತಿ. ಬಿಜು ಹಲ್ಲೆ ಮಾಡಿದ ಆರೋಪಿ.
ಪ್ರಕರಣದ ವಿವರ:
ಯುವತಿ ಸೋನ್ವಿ ತಾಯಿ ಮರಣ ಹೊಂದಿದ್ದು, ಆಕೆ ಬಳ್ಳಿಕಜೆಯಲ್ಲಿರುವ ತನ್ನ ಅಜ್ಜಿ ಮರಿಯಮ್ಮ ಅವರೊಂದಿಗೆ ವಾಸವಾಗಿದ್ದಾಳೆ. ಆರೋಪಿ ಮಾವ ಬಿಜು ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದವನಾಗಿದ್ದರೂ, ಕಳೆದ ಒಂದು ವರ್ಷದಿಂದ ಅಜ್ಜಿಯ ಮನೆಯಾದ ಬಳ್ಳಿಕಜೆಯಲ್ಲೇ ಉಳಿದುಕೊಂಡಿದ್ದನು. ಈತ ಪ್ರತಿದಿನ ಅಮಲು ಪದಾರ್ಥ ಸೇವಿಸಿ ಬಂದು ಸೋನ್ವಿ ಹಾಗೂ ಆಕೆಯ ಅಜ್ಜಿಗೆ ಮಾನಸಿಕ ಹಾಗೂ ದೈಹಿಕ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಅಜ್ಜಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರು ಬುದ್ದಿಮಾತು ಹೇಳಿದ್ದರೂ ಬಿಜು ತನ್ನ ವರ್ತನೆ ಬದಲಿಸಿಕೊಂಡಿರಲಿಲ್ಲ.
ಕಳೆದ ಏಪ್ರಿಲ್ 26 ರಂದು ಮಧ್ಯಾಹ್ನ 1:30 ರ ಸುಮಾರಿಗೆ ಸೋನ್ವಿ ತನ್ನ ಅಜ್ಜಿ ಹಾಗೂ ನೆರೆಮನೆಯ ಪ್ರಮೀಳಾ ಅವರೊಂದಿಗೆ ಚರ್ಚ್‌ಗೆ ಹೋಗಿ ವಾಪಸ್ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿದ್ದ ಬಿಜು, “ನೀನು ಯಾಕೆ ಇಲ್ಲಿಗೆ ಬಂದೆ?” ಎಂದು ಜೋರಾಗಿ ಬೈಯಲು ಶುರು ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಕಿಬ್ಬೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದಿದ್ದಾನೆ. ಅಲ್ಲದೆ “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಹಲ್ಲೆಯಿಂದ ತೀವ್ರ ನೋವು ಅನುಭವಿಸಿದ ಸೋನ್ವಿ ಅವರನ್ನು ಅಜ್ಜಿ ಮರಿಯಮ್ಮ ಮತ್ತು ನೆರೆಮನೆಯ ಪ್ರಮೀಳಾ ತಕ್ಷಣವೇ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವತಿ ಅಜ್ಜಿಯ ಮನೆಯಲ್ಲಿ ಇರುವುದೇ ಈ ಹಲ್ಲೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಘಟನೆ ನಡೆದ ದಿನವೇ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಕಡಬ ಪೊಲೀಸರು ಠಾಣಾ ಎನ್‌ಸಿ ಸಂಖ್ಯೆ: 05/PTN/KPS/2026 ರಂತೆ ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿಗಾಗಿ ಹಿಂಬರಹ ನೀಡಿದ್ದರು. ಇದೀಗ ಪುತ್ತೂರಿನ ಮಾನ್ಯ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ (Dis. No. 898/2026), ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 351(3), 352, ಮತ್ತು 115(2) ರ ಅಡಿಯಲ್ಲಿ ಮಾವ ಬಿಜು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


