
ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಒಂಟಿಯಾಗಿ ವಾಸವಿದ್ದ ಸುಂದರ ಶೆಟ್ಟಿ (75) ಎಂಬ ವೃದ್ಧರ ಮೃತದೇಹ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಮೂಲತಃ ಆಲಂಕಾರು ಗ್ರಾಮದ ಕಿನ್ನಿಗೋಳಿ ನಿವಾಸಿಯಾದ ಇವರು, ರಾಮಕುಂಜ ಶಾರದಾನಗರದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು.
ಸುಮಾರು ಒಂದು ತಿಂಗಳ ಹಿಂದೆ ಇವರ ಪತ್ನಿ ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದರಿಂದ ಸುಂದರ ಶೆಟ್ಟಿಯವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಆಗಸ್ಟ್ 8 ರಂದು ಇವರ ಹಿರಿಯ ಪುತ್ರ ಮನೆಗೆ ಬಂದು ತಂದೆಯ ಯೋಗಕ್ಷೇಮ ವಿಚಾರಿಸಿ ತೆರಳಿದ್ದರು.
ಆದರೆ ಕಳೆದ ಎರಡು-ಮೂರು ದಿನಗಳಿಂದ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ನೆರೆಹೊರೆಯವರು, ಗುರುವಾರ ಸಂಜೆ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ತಕ್ಷಣವೇ ಮೃತರ ಪುತ್ರ ಸೋಮಸುಂದರ ಶೆಟ್ಟಿ ಹಾಗೂ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕುಟುಂಬಸ್ಥರು ಒಳಗಿನಿಂದ ಚಿಲಕ ಹಾಕಿದ್ದ ಬಾಗಿಲನ್ನು ಮುರಿದು ಒಳಪ್ರವೇಶಿಸಿದಾಗ, ಸುಂದರ ಶೆಟ್ಟಿಯವರು ಚಾಪೆಯ ಮೇಲೆ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟು ಶವ ಕೊಳೆತು ಹೋಗಿರುವುದು ಕಂಡುಬಂದಿದೆ. ನಿದ್ರೆಯಲ್ಲಿದ್ದಾಗ ಸಂಭವಿಸಿದ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಮೃತರ ಪುತ್ರ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


