
ಕಡಬ: ಬಸ್‌ನಿಂದ ಇಳಿಯುತ್ತಿದ್ದ ವೇಳೆ ಒಮ್ಮೆಲೇ ಚಾಲಕ ಬಸ್ ಚಲಾಯಿಸಿದ ಪರಿಣಾಮ ಆಯತಪ್ಪಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಪೆರಾಬೆ ಗ್ರಾಮದ ಬೆಳ್ಪಾಡಿ ನಿವಾಸಿ ಬಾಬು ಮನ್ಸ (65) ಮೃತರು.
ಜನವರಿ 03ರಂದು ಸಂಜೆ ಸುಮಾರು 6:30ರ ವೇಳೆಗೆ ಬಾಬು ಮನ್ಸ ಅವರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಂತೂರಿಗೆ ಆಗಮಿಸಿದ್ದರು. ಕುಂತೂರು ಬಸ್ ನಿಲ್ದಾಣದಲ್ಲಿ ಬಸ್ಸು ನಿಂತಾಗ ಅವರು ಹಿಂಬದಿ ಬಾಗಿಲಿನಿಂದ ಕೆಳಕ್ಕೆ ಇಳಿಯುತ್ತಿದ್ದರು. ಈ ಸಂದರ್ಭದಲ್ಲಿ ಬಸ್ ಚಾಲಕನು ಪ್ರಯಾಣಿಕರು ಇಳಿದಿದ್ದಾರೆಯೇ ಎಂದು ಗಮನಿಸದೆ, ಅಜಾಗರೂಕತೆಯಿಂದ ಬಸ್ಸನ್ನು ಒಮ್ಮಲೇ ಮುಂದಕ್ಕೆ ಚಲಾಯಿಸಿದ್ದಾರೆ. ಇದರಿಂದಾಗಿ ಹಿಡಿತ ತಪ್ಪಿದ ಬಾಬು ಮನ್ಸ ಅವರು ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಅಪಘಾತದಿಂದಾಗಿ ಅವರ ಎಡ ತೊಡೆ ಮತ್ತು ಬಲ ಕಾಲಿನ ಮೊಣಗಂಟಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು. ಸ್ಥಳೀಯರಾದ ಚರಣ್ ರಾಜ್ ಮತ್ತು ನವೀನ್ ಎಂಬುವವರು ಕೂಡಲೇ ಗಾಯಾಳುವನ್ನು ಕಾರಿನ ಮೂಲಕ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಂದು ರಾತ್ರಿ 10:35ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು: ಘಟನೆಗೆ ಸಂಬಂಧಿಸಿದಂತೆ ಮೃತರ ಪರಿಚಯಸ್ಥರಾದ ಚರಣ್ ರಾಜ್ ಕೆ. ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281, 125(b) ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


