ಉಡುಪಿ: ಪರಿಶಿಷ್ಟ ಕೊರಗ ಸಮುದಾಯದ ಹೆಮ್ಮೆಯ ಮಗಳು, ತೆಕ್ಕಟ್ಟೆಯ ಕೆ. ಸ್ನೇಹಾ ಕುಂದಾಪುರ ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಯಶಸ್ವಿಯಾಗಿ ಪೂರೈಸಿದ ಈ ಪ್ರದೇಶದ ಎಸ್‌ಟಿ ಸಮುದಾಯದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿ .ಗಣೇಶ್ ಮತ್ತು ಜಯಶ್ರೀ ಶೆಟ್ಟೇರಿ ಅವರ ಹಿರಿಯ ಪುತ್ರಿ ಸ್ನೇಹ, ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಅಂಕೋಲಾ ನಿರ್ಮಲ ಹೃದಯ ಶಾಲೆ ಮತ್ತು ಕುಂದಾಪುರದ ಹೋಲಿ ರೋಸರಿ ಶಾಲೆಯಲ್ಲಿ ಪೂರ್ಣಗೊಳಿಸಿದರು, ನಂತರ ಹೆಬ್ರಿಯ ಜವಾಹರ್ ನವೋದಯ ವಿದ್ಯಾಲಯ, ಬಳಿಕ ಮೂಡಬಿದ್ರಿಯ ಆಳ್ವಾಸ್‌ನಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆದರು.
ಸ್ನೇಹಾ ಮಂಗಳೂರಿನ ಎಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಬಿಬಿಎಸ್ ಮುಗಿಸಿದರು ಮತ್ತು ನಂತರ ನವದೆಹಲಿಯ ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚಿನ ವೈದ್ಯಕೀಯ ಅಧ್ಯಯನವನ್ನು ಮಾಡಿದರು. ಪಿಎಚ್‌ಸಿ ಕೋಟ ದಲ್ಲಿ ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರೆಸಿದರು ಮತ್ತು ನವದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಿಂದ ಎಂಡಿಯವ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.


