ಮಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜ.28ರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮಗೆ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಬಲ್ಲಾಳ್ ಅವರು ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 2,500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈಗಾಗಲೇ ಐಸಿಡಿಎಸ್ ಯೋಜನೆ ಪ್ರಾರಂಭವಾಗಿ 50 ವರ್ಷಗಳ ಕಳೆದಿವೆ. ಈ ಯೋಜನೆ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ನಮ್ಮ ಇಲಾಖೆ ಜೊತೆಗೆ ಇತರ ಇಲಾಖೆಗಳ ಕೆಲಸ ನಿರ್ವಹಿಸಿಕೊಂಡು ಬಂದಿರುವ ನಮಗೆ ಕನಿಷ್ಠ ಗೌರವಧನ ನೀಡುತ್ತಿಲ್ಲ’ ಎಂದು ತಿಳಿಸಿದರು.
‘ಇನ್ನು ಕನಿಷ್ಠ ₹25 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ, ಹಾಗೂ ₹12 ಸಾವಿರ ಕನಿಷ್ಠ ವೇತನ ಸಹಾಯಕಿಯರಿಗೆ ನೀಡಬೇಕು. ಕಾರ್ಯಕರ್ತೆಯರನ್ನು ಸಿ ದರ್ಜೆ ಹಾಗೂ ಸಹಾಯಕಿಯರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು,’ ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಆಶಾಲತಾ ಎಂ.ವಿ ಅವರು, ಅಂಗನವಾಡಿ ಕೇಂದ್ರಕ್ಕೆ ಬಾಗಿಲು ಹಾಕಿ ಧರಣಿಯಲ್ಲಿ ನಾವು ಭಾಗವಹಿಸುತ್ತೇವೆ. ಮಕ್ಕಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು. ಬೇಡಿಕೆ ಈಡೇರುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ರಾಜೀವಿ, ವಿಶಾಲಾಕ್ಷಿ, ಚಂದ್ರಾವತಿ, ವಿಜಯವಾಣಿ, ಶಕೀಲಾ ಉಪಸ್ಥಿತರಿದ್ದರು.