Tuesday, September 1, 2026
Homeಪ್ರಮುಖ-ಸುದ್ದಿವಿಧಿಗೇ ಸವಾಲೆಸೆದ ಬಾಲಕಿ;ಕಣ್ಣೀರು ತರಿಸುತ್ತೆ ಈಕೆಯ ಹೆಜ್ಜೆಗಳು!

ವಿಧಿಗೇ ಸವಾಲೆಸೆದ ಬಾಲಕಿ;ಕಣ್ಣೀರು ತರಿಸುತ್ತೆ ಈಕೆಯ ಹೆಜ್ಜೆಗಳು!

- Advertisement -
- Advertisement -

ಉತ್ತರ ಪ್ರದೇಶ: ಬಡತನ, ಅಂಗವೈಕಲ್ಯ ಹಾಗೂ ವಿಧಿಯ ಸಾಲು ಸಾಲು ಆಘಾತಗಳ ನಡುವೆಯೂ ಶಿಕ್ಷಣದ ಕನಸು ಕಾಣುತ್ತಿರುವ 7 ವರ್ಷದ ಬಾಲಕಿಯೊಬ್ಬಳು ಇಡೀ ದೇಶದ ಗಮನ ಸೆಳೆದಿದ್ದಾಳೆ. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರೂ, ಕಲಿಯುವ ಆಸೆಯಿಂದ ಪ್ರತಿದಿನ ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ಹೋಗುತ್ತಿರುವ ಉತ್ತರ ಪ್ರದೇಶದ ಬಳ್ಳಿಯಾ ಜಿಲ್ಲೆಯ ರಾಗಿಣಿಯ ಹೋರಾಟದ ಕಥೆ ಇದು.

ದಿಗೇಡಾ ಗ್ರಾಮದ ನಿವಾಸಿಯಾಗಿರುವ ರಾಗಿಣಿಗೆ ಕೇವಲ ಆರೇ ತಿಂಗಳಿದ್ದಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಕೆಯ ಒಂದು ಕಾಲು ಸಂಪೂರ್ಣವಾಗಿ ಉನಿಸಿ ಹೋಗಿತ್ತು. ಬಡ ಕುಟುಂಬದ ಹಿನ್ನೆಲೆಯುಳ್ಳ ದಿನಗೂಲಿ ಕಾರ್ಮಿಕ ಪೋಷಕರಿಗೆ ಆಕೆಯ ಕಾಲನ್ನು ಚಿಕಿತ್ಸೆ ಕೊಡ್ಸಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ವಯಸ್ಸು ಬೆಳೆದಂತೆ ರಾಗಿಣಿಯಲ್ಲಿದ್ದ ಕಲಿಯುವ ಛಲ ಮಾತ್ರ ಕುಗ್ಗಲಿಲ್ಲ.

ಪ್ರಸ್ತುತ ದಿಗೇಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ರಾಗಿಣಿಗೆ ಮನೆಯಿಂದ ಶಾಲೆಗಿರುವ 400 ಮೀಟರ್ ಅಂತರವೇ ಒಂದು ದೊಡ್ಡ ಸವಾಲು. ನೆರೆಹೊರೆಯ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ಅತ್ತು ಪಟ್ಟುಹಿಡಿದು ಶಾಲೆಗೆ ಸೇರಿದ ಈ ಮಗು, ಪ್ರತಿದಿನ ಒಂದೇ ಕಾಲಿನಲ್ಲಿ ಜಿಗಿಯುತ್ತಾ ಶಾಲೆಯತ್ತ ಹೊರಡುತ್ತಾಳೆ. ಹಾದಿಯಲ್ಲಿ ನೂರಾರು ಬಾರಿ ಬಿದ್ದು, ನೋವಿನಿಂದ ರಸ್ತೆಯಲ್ಲೇ ಕುಳಿತು ಅತ್ತರೂ, ಮತ್ತೆ ಕಣ್ಣೀರು ಒರೆಸಿಕೊಂಡು ಶಾಲೆಯತ್ತ ಹೆಜ್ಜೆ ಹಾಕುತ್ತಾಳೆ.

ಆಸರೆಗೆ ನಿಂತ ಶಿಕ್ಷಣ ಇಲಾಖೆ:

ಬಾಲಕಿಯ ಈ ಅಸಾಧಾರಣ ಹೋರಾಟದ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಬಳ್ಳಿಯಾ ಜಿಲ್ಲಾ ಬೇಸಿಕ್ ಶಿಕ್ಷಣಾಧಿಕಾರಿ ಮನೀಶ್ ಕುಮಾರ್ ಸಿಂಗ್ ಸ್ಪಂದಿಸಿದ್ದಾರೆ. “ಮಗುವಿಗೆ ಇಲಾಖೆಯಿಂದ ಶೀಘ್ರದಲ್ಲೇ ಕೃತಕ ಕಾಲು ಜೋಡಿಸಲು ವ್ಯವಸ್ಥೆ ಮಾಡಲಾಗುವುದು. ಜೊತೆಗೆ ವಾರ್ಷಿಕ 2,000 ರೂ. ಸ್ಟೈಫಂಡ್ ಹಾಗೂ ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಗೆ ಪೂರ್ಣ ಆರ್ಥಿಕ ನೆರವು ನೀಡಲಾಗುವುದು” ಎಂದು ತಿಳಿಸಿದ್ದಾರೆ.

ವಿಧಿಯ ಕಠಿಣ ಪರೀಕ್ಷೆಯ ನಡುವೆಯೂ ಸೋಲೊಪ್ಪಿಕೊಳ್ಳದ ಈ ಪುಟ್ಟ ಮಗುವಿನ ಛಲಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!