Friday, June 27, 2025
Homeತಾಜಾ ಸುದ್ದಿನಕ್ಸಲೀಯ ಚಟುವಟಿಕೆಗಳಲ್ಲಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕು; ಸಿಎಂ ಸಿದ್ದರಾಮಯ್ಯ ಕರೆ

ನಕ್ಸಲೀಯ ಚಟುವಟಿಕೆಗಳಲ್ಲಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕು; ಸಿಎಂ ಸಿದ್ದರಾಮಯ್ಯ ಕರೆ

spot_img
- Advertisement -
- Advertisement -

ಬೆಂಗಳೂರು: ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ರಾಜ್ಯ ಸರ್ಕಾರವು ಬಯಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ತಿಳಿಸಿರುವ ಸಿಎಂ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಎಲ್ಲಾ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ.

ನಕ್ಸಲೀಯರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಅದ್ಯಾರ್ಪಣೆ ಮಾಡುವ ನಕ್ಸಲೀಯರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರುಗಳ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮ ವಹಿಸಲಾಗುವುದು ಎಂದು ಕೂಡಾ ಸಿಎಂ ಭರವಸೆ ನೀಡಿದ್ದಾರೆ.

ಅದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಯಾರೇ ಆದರೂ, ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ನಮ್ಮ ಸರ್ಕಾರವು ತೆಗೆದುಕೊಳ್ಳಲಿದೆ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ

- Advertisement -
spot_img

Latest News

error: Content is protected !!