ಪುತ್ತೂರು: ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪತ್ರವನ್ನೇ ಪಡೆಯದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದ್ದು ಅಂತಹ ಅಂಗಡಿಗಳಿಗೆ ನಗರಸಭೆ ಬೀಗ ಜಡಿಯಲು ಮುಂದಾಗಿದೆ. ಉದ್ದಿಮೆ ನಡೆಸುವ ಅಂಗಡಿ ಮಾಲೀಕರು ಅಧಿನಿಯಮದ ಪ್ರಕಾರ ಪರವಾನಿಗೆ ಪತ್ರ ಪಡೆದೆ ವ್ಯವಹಾರ ಮಾಡಬೇಕು. ಉದ್ಯಮ ಪರವಾನಿಗೆ ಪತ್ರ ಇಲ್ಲದಿದ್ದರೆ ಅದನ್ನು ಅನಧಿಕೃತ ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕೃತ, ಅನಧಿಕೃತ ಅಂಗಡಿ ಪತ್ತೆ ಕಾರ್ಯ ನಡೆಸಲಾಗಿದೆ.
ಪರವಾನಿಗೆ ಪಡೆದ ಕಟ್ಟಡದಲ್ಲಿ ವ್ಯವಹಾರ ಆರಂಭಿಸುವ ಮೊದಲ ಅಂಗಡಿ ಮಾಲಕ ನಗರಸಭೆಗೆ ಅರ್ಜಿ ಸಲ್ಲಿಸಿ (ಆನ್‌ಲೈನ್) ಉದ್ಯಮ ಪರವಾನಿಗೆ ಪಡೆಯಬೇಕು. ಪ್ರತೀ ವರ್ಷ ಪರವಾನಿಗೆ ಪತ್ರವನ್ನು ನವೀಕರಿಸಬೇಕು. ಆದರೆ ಪುತ್ತೂರು ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪಡೆದು ಕೊಳ್ಳದೆ ವ್ಯಾಪಾರ ವ್ಯವಹಾರ ನಡೆಸುತ್ತಿದೆ. ಇದು ಕಾನೂನು ಬಾಹಿರವಾಗಿದ್ದು ಈ ಹಿನ್ನೆಲೆಯಲ್ಲಿ ಪೌರಾ ಯುಕ್ತರ ನೇತೃತ್ವದ ಅಧಿಕಾರಿಗಳ ತಂಡವು ಅಂತಹ ಅಂಗಡಿಗಳನ್ನು ಗುರುತು ಮಾಡಿದೆ.
ಪ್ರತೀ ಹತ್ತು ವಾರ್ಡ್‌ಗಳಿಗೆ ಒಂದು ತಂಡದಂತೆ ಒಟ್ಟು ಮೂರು ತಂಡ ರಚಿಸಲಾಗಿದೆ. ಈ ತಂಡವು ವಾರ್ಡ್ ವಾರು ಸಮೀಕ್ಷೆ ನಡೆಸುತ್ತಿದ್ದು ಉದ್ಯಮ ಪರವಾನಿಗೆ ರಹಿತವಾಗಿ ವ್ಯವಹಾರ ನಡೆಸುವ ಅಂಗಡಿಗೆ ನೋಟಿಸ್ ನೀಡಿದೆ. ನೋಟಿಸ್ ಸ್ವೀಕರಿಸಿದ ಮೂರು ದಿನದೊಳಗೆ ಉದ್ಯಮ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಿ ಪರವಾನಿಗೆ ಪತ್ರ ಪಡೆಯಬೇಕು. ತಪ್ಪಿದಲ್ಲಿ ಎಚ್ಚರಿಕೆ ನೀಡಿದ ಮೂರು ದಿನದಲ್ಲಿ ಅಂಗಡಿಗೆ ಬೀಗ ಜಡಿಯಲು ನಗರಸಭೆ ನಿರ್ಧರಿಸಿದೆ.
ಬೀದಿ ಬದಿ ವ್ಯಾಪಾರ ಹಾಗೂ ಗೂಡಂಗಡಿಗಳಿಗೆ ಉದ್ಯಮ ಪರವಾನಿಗೆ ಪತ್ರದ ಆವಶ್ಯಕತೆ ಇಲ್ಲ. ಪುತ್ತೂರು ನಗರದಲ್ಲಿ 75 ಗೂಡಂಗಡಿಗಳಿಗೆ ನಗರಸಭೆ ವತಿಯಿಂದ ಅನುಮತಿ ನೀಡಲಾಗಿದೆ. ಗೂಡಂಗಡಿ ತೆರೆಯುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ನಗರಸಭೆಯ ಅನುಮತಿ ಪಡೆದುಕೊಳ್ಳದೆ ಏಕಾಏಕಿ ಗೂಡಂಗಡಿ ತೆರೆದರೆ ಅದು ನಿಯಮಕ್ಕೆ ವಿರುದ್ಧ ಎಂದಾಗಿ ಅನಧಿಕೃತ ಅಂಗಡಿ ಸಾಲಿಗೆ ಸೇರುತ್ತದೆ.


