ಕೊರೋನಾ ಎಂಬ ಮಹಾಮಾರಿಗೆ ನಲುಗಿ ಜನ ಜೀವನ ಅಸ್ಥವ್ಯಸ್ಥಯಾಗಿದೆ. ಲಾಕ್ ಡೌನ್ ನಿಂದಾಗಿ ಅನೇಕ ಜನರ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿ ಹೋಗಿದೆ. ಈ ನಡುವೆ ಮಾನವೀಯತೆಯ ಸಾಕಾರ ಮೂರ್ತಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಹಿಳಾ ಪೋಲೀಸರು ಮೂಡಿ ಬಂದಿದ್ದಾರೆ.
ಬಡತನದ ಬೇಗೆಯಿಂದ ಬೇಯುತ್ತಿದ್ದ, ಮನೆಗೆ ಬೇಕಾದ ಅಗತ್ಯಸಾಮಾಗ್ರಿಗಳನ್ನು ಕೊಳ್ಳಲಾಗದೆ ಕಡಬದ ಬೀದಿಯಲ್ಲಿ ತಿರುಗಾಡುತ್ತಿದ್ದ ವೃದ್ದೆಯೊಬ್ಬರಿಗೆ ಈ ಮಹಿಳಾ ಪೇದೆಯರು ತಮ್ಮ ಸ್ವಂತ ಹಣದಿಂದಲೇ ಮನೆಗೆ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟಿದ್ದಾರೆ.
ಕಡಬ ಪೋಲೀಸ್ ಠಾಣೆಯ ಭಾಗ್ಯಮ್ಮ ಮತ್ತು ನಾಗಲಕ್ಷ್ಮಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವೃದ್ದೆಯ ಈ ಸಂಕಷ್ಟ ಬೆಳಕಿಗೆ ಬಂದಿತ್ತು. ತಕ್ಷಣವೇ ಸ್ಪಂದಿಸಿದ ಇಬ್ಬರೂ ತಮ್ಮ ಜೇಬಲ್ಲಿದ್ದ ಹಣವನ್ನು ಒಟ್ಟುಗೂಡಿಸಿ ವೃದ್ದೆಯ ಮನೆಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಅಲ್ಲದೆ ವೃದ್ದೆಯನ್ನು ಅಟೋ ಮೂಲಕ ಮನೆಗೆ ತಲುಪಿಸುವ ಕೆಲಸವನ್ನೂ ಮಾಡಿದ್ದಾರೆ.
ಮಹಿಳಾ ಪೋಲೀಸರು ವೃದ್ದೆಗೆ ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಯಾರೋ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ಧಾರೆ. ಪೊಲೀಸರ ಈ ಮಾನವೀಯತೆಯ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.