ಕೊರೊನಾ ವೈರಸ್ ವಿರುದ್ಧ ಅನೇಕ ಪೊಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಗಳು ತಮ್ಮ ಕುಟುಂಬದಿಂದ ದೂರವಿದ್ದು ಜನರ ಜೀವವನ್ನು ಕಾಪಾಡುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ದರು ಮಹಿಳಾ ವೈದ್ಯೆ ಕೊರೊನಾ ಟೆಸ್ಟ್ ಕಿಟ್ ತಯಾರಿಸಿ ಮರುದಿನ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ.
ಜಿ.ಸೃಜನಾ ಮಾತೃತ್ವ ರಜೆಯನ್ನು ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ಸೃಜನಾ ಅವರು ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೃಜನಾ ಅವರಿಗೆ ಗಂಡು ಮಗು ಜನಿಸಿದೆ. ಆದರೆ ಮಗು ಜನಿಸಿದ 22 ದಿನಗಳಲ್ಲೇ ಕೆಲಸಕ್ಕೆ ವಾಪಸ್ ಆಗಿದ್ದಾರೆ.
ಸೃಜನಾ ಅವರು 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಅವಕಾಶವಿದೆ. ಆದರೆ ದೇಶದಲ್ಲಿ ಕೊರೊನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಜೊತೆಗೆ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಸೃಜನಾ ಅವರು, ತನ್ನ ಪತಿ ಮತ್ತು ತಾಯಿ ನನಗೆ ತುಂಬಾ ಸಂಪೋರ್ಟ್ ಮಾಡುತ್ತಿದ್ದಾರೆ. ನಾನು 4 ಗಂಟೆಗೊಮ್ಮೆ ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ಬರುತ್ತೇನೆ. ಈ ವೇಳೆ ತನ್ನ ಪತಿ ಮತ್ತು ತಾಯಿ ಮಗುವನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
