ಬೆಂಗಳೂರು: ರಾಜ್ಯದಲ್ಲಿ ಮನೆ ನಿವೇಶನ ಹೊಂದಿರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಪಟ್ಟಿ ಮಾಡಿ ಅವರಿಗೆ ತ್ವರಿತವಾಗಿ ನಿವೇಶನಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.
ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಪೈಲಟ್ ಜಿಲ್ಲೆಗಳನ್ನು ಆಯ್ಕೆ ಮಾಡಲಾಯಿತು.
ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಮನೆ/ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಬೇಕು. ಈ ಮಹತ್ವದ ಕಾರ್ಯವನ್ನು ನಡೆಸಲು ಆರಂಭಿಕವಾಗಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ, ಮೈಸೂರು ವಿಭಾಗದಲ್ಲಿ ಚಾಮರಾಜ ನಗರ, ಕಲಬುರ್ಗಿ ವಿಭಾಗದಲ್ಲಿ ರಾಯಚೂರು ಮತ್ತು ಬೆಳಗಾವಿ ವಿಭಾಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದನ್ನು ಪೈಲಟ್ ಆಗಿ ಅನುಷ್ಠಾನಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರ ಮನೆ ಒದಗಿಸಲು, ಆಯ್ದ ಜಿಲ್ಲೆಗಳಲ್ಲಿ ಸರಕಾರಿ ಭೂಮಿ ಲಭ್ಯತೆ, ಮನೆ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಳಿಕ ಪ್ರತೀ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿವೇಶನ ಒದಗಿಸಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಿ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಸಚಿವ ಕೋಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.