ಕುಂದಾಪುರ: ಸ್ಕೂಟಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಅಜಿತ್ ಲೂವಿಸ್ ಎನ್ನಲಾಗಿದೆ. ಕುಂದಾಪುರದ ಜೆಎಲ್ಬಿ ರಸ್ತೆಯ ನಿವಾಸಿಯಾಗಿದ್ದ ಅಜಿತ್ ಲೂವಿಸ್ ಅವರು ಸ್ಕೂಟಿಯಲ್ಲಿ ತ್ರಾಸಿ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅರಾಟೆ ಸೇತುವೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿದುಬಂದಿದೆ.
ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಎಚ್ಎಂ ಆಂಬುಲೆನ್ಸ್ ಸೇವೆಯ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರಾರ್ ಸಹಕರಿಸಿದರು.
1990ರ ದಶಕದಲ್ಲಿ ಅಜಿತ್ ಲೂವಿಸ್ ಅವರು ತಮ್ಮ ಸ್ನೇಹಿತ ಸತೀಶ್ ಖಾರ್ವಿ ಅವರೊಂದಿಗೆ ಕುಂದಾಪುರದಲ್ಲಿ ಜನಪ್ರಿಯ ಗ್ರಾಫಿಕ್ಸ್ ಸಂಸ್ಥೆ ‘ಸ್ಯಾನ್ಜೋಸ್ ಡೇಟಾ ಸಿಸ್ಟಮ್ಸ್’ ಸ್ಥಾಪಿಸಿದ್ದರು. ಬಳಿಕ ಗಲ್ಫ್ ರಾಷ್ಟ್ರಗಳಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಕೇವಲ ಎರಡು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಮರಳಿದ್ದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.


