ಶ್ರೀನಗರ: ಕಾಶ್ಮೀರದ ಪುಲ್ವಾಮದಲ್ಲಿ ಇಂದು ಭಾರತೀಯ ಸೇನೆ ನಡೆಸಿದ ಕಾರ್ಯಚರಣೆಯಲ್ಲಿ ಹಿಜ್ ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನೈಕೂ ಸೇರಿ 4 ಉಗ್ರರು ಹತರಾಗಿದ್ದಾರೆ.
ರಿಯಾಜ್ ನೈಕೂ ಜೊತೆ ಮತ್ತೊಬ್ಬ ಭಯೋತ್ಪಾದಕ ಬಲಿಯಾಗಿದ್ದಾನೆ, ಜೊತೆಗೆ ಇಬ್ಬರು ಉಗ್ರರು ಸೆರೆಸಿಕ್ಕಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಭದ್ರತಾ ಪಡೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾಜ್ ನಾಯ್ಕು ನಿಷೇಧಿತ ಭಯೋತ್ಪಾದಕ ಸಂಘಟನೆಯ ಹಿಜ್ಬುಲ್ ಮುಜಾಹಿದ್ದೀನ್ ಅವರ ಪ್ರಮುಖ ಕಮಾಂಡರ್ ಆಗಿದ್ದರು. ಈತ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಮಂಗಳವಾರ ರಾತ್ರಿ ಬೀಗ್‌ಬೊರಾ ಗ್ರಾಮದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ನಂತರ ಗುಂಡಿನ ಚಕಮಕಿ ನಡೆದಿತ್ತು, ಇಂದು ಮದ್ಯಾಹ್ನದವರೆಗೂ ದಾಳಿ ನಡೆದಿದೆ.
ಈ ನಡುವೆ ಸೇನಾ ಪಡೆಗಳು ಅವಂತಿಪೋರಾದಲ್ಲಿ ಒಂದು ಮನೆಯನ್ನು ಸ್ಫೋಟಿಸಿದ್ದು, ಇದರಲ್ಲಿ ರಿಯಾಜ್ ನಾಯ್ಕು ಸಿಕ್ಕಿಬಿದ್ದಿರಬಹುದೆಂದು ಶಂಕಿಸಲಾಗಿದೆ. ಮನೆಯನ್ನು ಸ್ಫೋಟಿಸಲು ಪಡೆಗಳು ಸುಮಾರು 40 ಕೆಜಿ ಐಇಡಿಯನ್ನು ಬಳಸಿದವು.
ರಿಯಾಜ್ ನಾಯ್ಕು ಅವರು ಬುಧವಾರ ಕೊಲ್ಲುವ ಮೊದಲು ಅವರನ್ನು ಹುಡುಕಿಕೊಟ್ಟವರಿಗೆ 12 ಲಕ್ಷ ರೂ ಘೋಷಿಸಲಾಗಿತ್ತು. ಜುಲೈ 2016 ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಬುರ್ಹಾನ್ ವಾನಿಯವರ ಮರಣದ ನಂತರ ನಾಯ್ಕು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥರಾಗಿ ಕಾರ್ಯ ಆರಂಭಿಸಿದ್ದನು.