ಬೆಳಗಾವಿ: ಜಿಲ್ಲಾಧಿಕಾರಿ ನಿವಾಸದ ಪ್ರವೇಶ ದ್ವಾರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಜಾಧವ ನಗರದಲ್ಲಿ ನಡೆದಿದೆ.
ಪ್ರಕಾಶ ಗುರುವಣ್ಣನವರರೇ ಆತ್ಮಹತ್ಯೆ ಮಾಡಿಕೊಂಡಿರುವ ಪೋಲಿಸ್ ಕಾನ್ಸ್ ಸ್ಟೇಬಲ್. ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯವರಾದ ಪ್ರಕಾಶ್ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆಂದು ನಿರ್ಮಿಸಿರುವ ಜಾಗದಲ್ಲಿ ಇಲಾಖೆಯಿಂದ ಕೊಟ್ಟಿದ್ದ ಎಸ್ ಎಲ್ ಆರ್ ಬಂದೂಕಿನಿಂದ ಕುತ್ತಿಗೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಿಡಬ್ಲ್ಯುಡಿ ಕ್ವಾರ್ಟರ್ಸ್ ನಲ್ಲಿ ವಾಸ ಮಾಡುತ್ತಿದ್ದ ಪ್ರಕಾಶ್ ಅವರಿಗೆ ಪತ್ನಿ, ಇಬ್ಬರು ಮಕ್ಕಳು, ತಾಯಿ, ತಮ್ಮ ಇದ್ದಾರೆ.
ಮಾಹಿತಿ ಪ್ರಕಾರ ಅವರು ಎರಡು ವರ್ಷಗಳಿಂದ ಮನೋವ್ಯಾದಿಯಿಂದ ಬಳಲುತ್ತಿದ್ದು, ಔಷಧಿ ಪಡೆಯುತ್ತಿದ್ದರು ಎನ್ನಲಾಗಿದೆ.