ಮಂಗಳೂರಿನ ಬಜಪೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತಷ್ಟು ಚುರುಕುಗೊಳಿಸಿದ್ದು, ಎನ್‌ಐಎ ಅಧಿಕಾರಿಗಳ ತಂಡ ಮಂಗಳವಾರ ಮತ್ತೆ ಬಜಪೆಗೆ ಭೇಟಿ ನೀಡಿದೆ.
ಎನ್‌ಐಎ ಡಿವೈಎಸ್ಪಿ ರಾಜೀವ್ ಸಿಂಗ್ ಹಾಗೂ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ಐವರು ಅಧಿಕಾರಿಗಳ ತಂಡ ಬಜಪೆ ಪೊಲೀಸ್ ಠಾಣೆಗೆ ಆಗಮಿಸಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಆಧಾರದ ಮೇಲೆ ಮೂವರನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದೆ.
ಕಳೆದ ಒಂದು ವರ್ಷದಿಂದ ಈ ಪ್ರಕರಣದ ಬೆನ್ನತ್ತಿರುವ ಎನ್‌ಐಎ, ಈ ಹಿಂದೆ 2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜಪೆ ಠಾಣಾ ವ್ಯಾಪ್ತಿಯ 14 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. 2025ರ ಮೇ 1ರಂದು ರಾತ್ರಿ ಬಜಪೆ ಬಳಿಯ ಕಿನ್ನಿಪದವು ಎಂಬಲ್ಲಿ ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿತ್ತು. ಈ ಹತ್ಯೆಗೆ ವಿದೇಶದಿಂದ ಫಂಡಿಂಗ್ ಆಗಿರುವ ಬಲವಾದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಪ್ರಕರಣದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದ್ದು ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


