ಮಂಗಳೂರು : ಮಂಗಳೂರು ನಗರದ ಕೇಂದ್ರ ಮಾರುಕಟ್ಟೆಯನ್ನು ನೆಲಸಮ ಮಾಡಲು ಮುಂದಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ಕಟ್ಟಡ ನೆಲಸಮಕ್ಕೆ ತಡೆಯಾಜ್ಞೆ ವಿಧಿಸಿದೆ.
ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಮನಪಾ ಕೇಂದ್ರ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಅತ್ಯಾಧುನಿಕ ಹೊಸ ಮಾರುಕಟ್ಟೆ ನಿರ್ಮಿಸಲು ಮುಂದಾಗಿತ್ತು. ಅಲ್ಲದೆ ಇಲ್ಲಿನ ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿತ್ತು.
ಈ ಮಧ್ಯೆ ಕೇಂದ್ರ ಮಾರುಕಟ್ಟೆ ನೆಲಸಮಗೊಳಿಸುವುದನ್ನು ಪ್ರಶ್ನಿಸಿ ಹನೀಫ್ ಮಲಾರ್, ಅಮ್ಮಿ ಮಾರಿಪಳ್ಳ, ಇಬ್ರಾಹಿಂ ಬಿಎಫ್ ಎಂಬವರು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ಮಂಗಳವಾರ ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಕೇಂದ್ರ ಮಾರುಕಟ್ಟೆ ನೆಲಸಮಕ್ಕೆ ತಡೆಯಾಜ್ಞೆ ನೀಡಿದ್ದಾರೆ ಹಾಗು ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಎ.ಎಸ್. ಪೊನ್ನನ್ನ, ಲತೀಫ್ ಬಡಗನ್ನೂರು, ಅಕ್ಬರ್ ಪಾಶಾ ವಾದಿಸಿದ್ದರು.