Sunday, May 5, 2024
Homeಕರಾವಳಿಉಡುಪಿಕಾಪು: ಶಿರ್ವ ಗ್ರಾಮದಲ್ಲೊಂದು ಹೈಟೆಕ್‌ ಅಂಗನವಾಡಿ: ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ ಹೊಸ ಸ್ಪರ್ಶ ಕೊಟ್ಟ ದಾನಿಗಳು

ಕಾಪು: ಶಿರ್ವ ಗ್ರಾಮದಲ್ಲೊಂದು ಹೈಟೆಕ್‌ ಅಂಗನವಾಡಿ: ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ ಹೊಸ ಸ್ಪರ್ಶ ಕೊಟ್ಟ ದಾನಿಗಳು

spot_img
- Advertisement -
- Advertisement -

ಕಾಪು: ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲಕ್ಷ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್‌ ಸ್ಪರ್ಶವಿರುವ ಜಿಲ್ಲೆಯ ಮೊದಲ ಹವಾನಿಯಂತ್ರಿತ ಅಂಗನವಾಡಿ ಕೇಂದ್ರವು ಕಾಪು ತಾಲೂಕಿನ ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಸಂಪೂರ್ಣ ಹವಾನಿಯಂತ್ರಣ ಅಂಗನವಾಡಿ ಬಡ ಮಕ್ಕಳಿಗೆ ಮುದನೀಡುತ್ತಿದೆ.

ದಿ| ಅಚ್ಯುತ ಕಾಮತ್‌ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ 6 ಸೆಂಟ್ಸ್‌ ಜಾಗದಲ್ಲಿ ತೀರಾ ದುಸ್ಥಿತಿಯಲ್ಲಿದ್ದ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿ ಇದ್ದ ಅಂಗನವಾಡಿಗೆ ಈಗ ಹೊಸಸ್ಪರ್ಶ ನೀಡಲಾಗಿದೆ ಸ್ಥಳೀಯ ಗ್ರಾ.ಪಂ.ಸದಸ್ಯರಾದ ಕೆ.ಆರ್‌.ಪಾಟ್ಕರ್‌ ಅವರ ಸತತ 6 ವರ್ಷಗಳ ಪರಿಶ್ರಮದಿಂದ ಅಂಗನ ವಾಡಿ ಕೇಂದ್ರಕ್ಕೆ ಇದೀಗ ಹೊಸ ಕಟ್ಟಡ ದೊಂದಿಗೆ ಆಧುನಿಕ ಸ್ಪರ್ಶ ದೊರೆತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 16.5 ಲ. ರೂ.ಗಳಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ತನ್ನ ಸ್ನೇಹಿತರು, ಪರಿಸರದ ಸಂಘಸಂಸ್ಥೆಗಳು ಹಾಗೂ ವಾಟ್ಸಾಪ್‌ ಸಂದೇಶಕ್ಕೆ ಸ್ಪಂದಿಸಿದ ದಾನಿಗಳ ಸಹಕಾರದಿಂದ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಸುಮಾರು 4 ಲ.ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ನ್ಯೂ ಲುಕ್  ನೀಡಿದ್ದಾರೆ.

ಸಂಘ ಸಂಸ್ಥೆಗಳಾದ ಬಂಟಕಲ್ಲು ನಾಗರಿಕ ಸೇವಾ ಸಮಿತಿ, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ, ಲಯನ್ಸ್‌ ಕ್ಲಬ್‌ ಬಂಟಕಲ್ಲು -ಬಿಸಿ ರೋಡ್‌, ಲಯನ್ಸ್‌ ಕ್ಲಬ್‌ ಬಂಟಕಲ್ಲು ಜಾಸ್ಮಿನ್‌, ಲಯನ್ಸ್‌ ಕ್ಲಬ್‌ ಉಡುಪಿ-ಕರಾವಳಿ, ರೋಟರಿ ಕ್ಲಬ್‌ ಶಿರ್ವ, ಸ್ತ್ರೀಶಕ್ತಿ ಸಂಘ ಮತ್ತು ಇತರ ದಾನಿಗಳು ಸಹಕರಿಸಿದ್ದಾರೆ.

ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿನಯಾ ಹರೀಶ್‌ ಕುಂದರ್‌, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿಯಾಗಿ ಶೈಲಾ ಕಾರ್ಯನಿರ್ವಹಿಸುತ್ತಿದ್ದಾರೆ.

ಇಷ್ಟಕ್ಕೂ ಹೈಟೆಕ್ ಅಂಗನವಾಡಿಯಲ್ಲಿ ಏನೆಲ್ಲಾ ಇದೆ ಗೊತ್ತಾ? ಅಂಗನವಾಡಿ ಸುತ್ತಲೂ ಆವರಣ ಗೋಡೆ, ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಗೋಡೆ ಬರಹ, ಕಾಟೂನ್‌ ಚಿತ್ರಗಳು, ಕೇಬಲ್‌ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾಟೂನ್‌ ನೆಟ್‌ವರ್ಕ್‌ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್‌ಲಾಕ್‌, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್‌ ಬೆಂಚುಗಳು, ಎರ‌ಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್‌ ಪ್ಯೂರಿಫೈಯರ್‌, ಸೋಫಾ, ಚಪ್ಪಲ್‌ ಸ್ಟಾಂಡ್‌, ಬ್ಯಾಗ್‌ ಸ್ಟಾಂಡ್‌, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್‌ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್‌ವಿದ್ಯುತ್‌ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಾನೈಟ್‌ ಹೊದಿಕೆಯ ಅಡುಗೆ ಕೋಣೆಯೊಂದಿಗೆ ಗ್ರೈಂಡರ್ ಮತ್ತು ಗ್ಯಾಸ್‌ ಸ್ಟೌ ಸೌಲಭ್ಯ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರ ತೋಟ ರಚನೆಯೊಂದಿಗೆ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ.ಅಂಗನವಾಡಿಯ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳಿಗೆ ಉಣಬಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಅಂಗನವಾಡಿಗೆ ಹೊಸ ಸ್ಪರ್ಶ ಕೊಟ್ಟು ಮಕ್ಕಳನ್ನು ಆಕರ್ಷಿಸುತ್ತಿರುವ ಅಂಗನವಾಡಿ ಗ್ರಾಮೀಣ ಮಕ್ಕಳಿಗೆ‌ ಮುದನೀಡುತ್ತಿದೆ.

- Advertisement -
spot_img

Latest News

error: Content is protected !!