
ಬೆಂಗಳೂರು: ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಯೊಬ್ಬರ 8 ತಿಂಗಳ ಮಗುವನ್ನು ಸಾಕಿ, ಆರೈಕೆ ಮಾಡುವ ಮೂಲಕ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಸಿಬ್ಬಂದಿ ಅಪಾರ ಮಾನವೀಯತೆ ಮೆರೆದಿದ್ದಾರೆ. ನಗರದ ಕೃಷ್ಣಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆಗಸ್ಟ್ 3ರಂದು ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಯೊಬ್ಬರು ತಮ್ಮ 8 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಆದರೆ, ಪರೀಕ್ಷಾ ಕೊಠಡಿಗೆ ತೆರಳುವ ಕೊನೆ ಗಳಿಗೆಯಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ಎಷ್ಟೇ ಪ್ರಯತ್ನಿಸಿದರೂ ಮಗುವಿನ ಅಳು ನಿಲ್ಲದಿದ್ದಾಗ, ಭವಿಷ್ಯ ರೂಪಿಸುವ ಪರೀಕ್ಷೆ ಬರೆಯಬೇಕೋ ಅಥವಾ ಕಂದಮ್ಮನನ್ನು ನೋಡಿಕೊಳ್ಳಬೇಕೋ ಎಂದು ತಿಳಿಯದೆ ತಾಯಿ ಸಂಕಷ್ಟಕ್ಕೆ ಸಿಲುಕಿದ್ದರು.
ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ತಾಯಿಯ ಸಂಕಟವನ್ನು ಗಮನಿಸಿ ತಕ್ಷಣ ನೆರವಿಗೆ ಧಾವಿಸಿದರು. “ನೀವು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ, ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಅಭಯ ನೀಡಿ ಮಗುವನ್ನು ತಮ್ಮ ವಶಕ್ಕೆ ಪಡೆದರು.
ತಾಯಿ ಪರೀಕ್ಷಾ ಕೊಠಡಿಗೆ ತೆರಳಿದ ಬಳಿಕ, ಪೊಲೀಸ್ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಆಟವಾಡಿಸುತ್ತಾ ಕಾಳಜಿಯಿಂದ ಆರೈಕೆ ಮಾಡಿದರು. ಪರೀಕ್ಷೆ ಮುಗಿಸಿ ಹೊರಬಂದ ತಾಯಿ, ಸಿಬ್ಬಂದಿಯ ಈ ಕರುಣೆಗೆ ಭಾವುಕರಾಗಿ ಧನ್ಯವಾದ ಅರ್ಪಿಸಿದರು. ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯ ಮೌಲ್ಯ ಎತ್ತಿಹಿಡಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


