ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು ದೇಹಕ್ಕೆ ತಂಪುಂಟು ಮಾಡುತ್ತದೆ ಮತ್ತು ರಕ್ತ ಕೆಟ್ಟು ಮೂಡುವ ಕುರ ಮೊದಲಾದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಬಸಳೆ ಸೊಪ್ಪು ಬಳಸಿ ಅಡುಗೆ ತಯಾರಿಸಬಹುದು.
ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ. ಮಕ್ಕಳು ಹಾಗು ಗರ್ಭಿಣಿಯರು ಈ ಸೊಪ್ಪನ್ನು ಸೇವಿಸುವುದರಿಂದ ಕಬ್ಬಿಣಾಂಶದ ಕೊರತೆ ಉಂಟಾಗದು. ಈ ಸೊಪ್ಪಿನಿಂದ ತಂಬುಳಿ, ಪಲ್ಯ, ಸಾಂಬಾರು ಹಾಗೂ ದೋಸೆಯನ್ನೂ ಮಾಡಬಹುದು. ಈ ಸೊಪ್ಪನ್ನು ಹಸಿಯಾಗಿಯೇ ಜಗಿಯುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ. ಇದರ ರಸಕ್ಕೆ ಬೆಣ್ಣೆ ಹಾಕಿ ಸುಟ್ಟ ಗಾಯಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ಹಾಲೂಡಿಸುವ ತಾಯಿ ನಿಯಮಿತವಾಗಿ ಬಸಳೆ ಸೇವಿಸಿದರೆ ಎದೆಹಾಲು ಹೆಚ್ಚುತ್ತದೆ.
ಇದನ್ನು ಬೆಳೆಯಲು ಕಷ್ಟವೇನಿಲ್ಲ. ಮನೆಯಂಗಳದಲ್ಲಿರುವ ಪಾಟ್ ನಲ್ಲಿ ಒಂದು ಕೋಲನ್ನು ನೆಟ್ಟರೂ ಸಾಕು ಅದು ಚಿಗುರಿ ಬೆಳೆಯುತ್ತದೆ. ಈ ಗಿಡಕ್ಕೆ ಉತ್ತಮ ಸೂರ್ಯನ ಬೆಳಕು, ನೀರು ಮತ್ತು ಫಲವತ್ತಾದ ಮಣ್ಣು ಇದ್ದರೆ ಸಾಕು, ಹೆಚ್ಚಿನ ಆರೈಕೆ ಇಲ್ಲದೆಯೂ ಸೊಂಪಾಗಿ ಬೆಳೆಯುತ್ತದೆ.