ಬೆಂಗಳೂರಿನ ಸಾದಿಕ್ ಪಾಳ್ಯದಲ್ಲಿ ಕೊರೊನ ಶಂಕಿತರ ತಪಾಸಣೆಗಾಗಿ ತೆರಳಿದ್ದ ಆಶಾಕಾರ್ಯಕರ್ತೆಯ ಮೇಲಿನ ಹಲ್ಲೆಯನ್ನು ಮಂಗಳೂರು ಕ್ಷೇತ್ರದ ಶಾಸಕ ಮತ್ತು ಮಾಜಿ ಅರೋಗ್ಯ ಸಚಿವ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ಕ್ಷಣವೂ ಜನರ ಹಿತಾಸಕ್ತಿಗಾಗಿ ದುಡಿಯುವ ವರ್ಗದಲ್ಲಿ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ. ಎಂದಿಗೂ ಜನರ ಹಿತಾಸಕ್ತಿಗೆ ನೋವುಂಟು ಮಾಡುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಿಲ್ಲ. ಅವರು ನಮ್ಮ ಕುಟುಂಬದ ಒಳಿತಿಗಾಗಿ ಬಂದು ಆರೋಗ್ಯದ ಕುರಿತು ಮಾಹಿತಿ ಕೇಳಿದರೆ ಅವರಿಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಖಾದರ್ ಹೇಳಿದರು.
ನೀವೇ ಖುದ್ದಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್-19 ಸೋಂಕಿನಿಂದ ಇಡೀ ಜಗತ್ತು ಆತಂಕದಲ್ಲಿದೆ. ಹಿಂದೆಂದೂ ನಾವು ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಇಂತಹಾ ಸಂಧರ್ಭದಲ್ಲಿ ನಾವು ಜಾತಿ, ಧರ್ಮ ಬೇಧ ಭಾವ ಮಾಡದೇ ಇದರ ವಿರುಧ್ಧ ಹೋರಾಡಬೇಕಿದೆ ಎಂದು ಯು.ಟಿ ಖಾದರ್ ತಮ್ಮ ಸಮಾಜ ಬಾಂಧವರ ಬಳಿ ಮನವಿ ಮಾಡಿಕೊಂಡಿದ್ದಾರೆ