ನವದೆಹಲಿ: ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಚಿವ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಮೌಲ್ಯಾಧಾರಿತ ಶಿಕ್ಷಣಕ್ಕೆ ಬಲವಾದ ಒತ್ತು ನೀಡುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅತ್ಯಗತ್ಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಶಿವಮೊಗ್ಗದಲ್ಲಿ ನಡೆದ ಗೀತಾ ಪಠಣ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದನ್ನು ಕುಮಾರಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.
ಗೀತೆಯಿಂದ ಆಯ್ದ ಬೋಧನೆಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ಚಿಂತನೆಯ ಸ್ಪಷ್ಟತೆ ಮತ್ತು ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ, ಆದ್ದರಿಂದ, ಭಗವದ್ಗೀತೆಯ ಕಾಲಾತೀತ ಮೌಲ್ಯಗಳನ್ನು ದೇಶಾದ್ಯಂತದ ವಿದ್ಯಾರ್ಥಿಗಳ ಕಲಿಕೆಯ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಸಂಯೋಜಿಸಲು ಈ ಪ್ರಸ್ತಾವನೆಗೆ ಸರಿಯಾದ ಪರಿಗಣನೆಯನ್ನು ನೀಡಿ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಕೇಂದ್ರ ಶಿಕ್ಷಣ ಸಚಿವರನ್ನು ಹೆಚ್.ಡಿ. ಕುಮಾರಸ್ವಾಮಿ ಪತ್ರದಲ್ಲಿ ಕೋರಿದ್ದಾರೆ


